ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು, ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಮೂಚಿಮುಲ್ ಉಪ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿವಿಧ ಯೋಜನೆಗಳ ಅನುದಾನದ ಚೆಕ್ ವಿತರಿಸಿ ಮಾತನಾಡಿ, ಖಾಸಗಿ ಡೇರಿಗಳಿಗೆ ಹಾಲು ಹಾಕುತ್ತಿರುವ ರೈತರು ರಾಸು ವಿಮೆಯಿಂದ ವಂಚಿತರಾಗಿದ್ದಾರೆ. ಅಂಥ ರೈತರು ತಾವು ಉತ್ಪಾದಿಸಿದ ಹಾಲನ್ನು ಕೋಚಿಮುಲ್ ವ್ಯಾಪ್ತಿಗೆ ಬರುವ ಡೇರಿಗಳಿಗೆ ಹಾಕುವುದರ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಉಪ ಕಚೇರಿ ಉಪ ವ್ಯವಸ್ಥಾಪಕ ಡಾ. ವಿ.ಎನ್.ಶ್ರೀಕಾಂತ್ ಮಾತನಾಡಿ, ಹಾಲು ಉತ್ಪಾದಕರು ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು. ಅದಕ್ಕೆ ತಕ್ಕ ದರ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಪಿ.ಕೆ.ನರಸಿಂಹರಾಜು, ಎನ್.ದೇವರಾಜ್, ಎಸ್.ವಿನಾಯಕ. ಎ.ಎನ್.ಶ್ರೀನಿವಾಸಮೂರ್ತಿ ಇದ್ದರು.