JANANUDI.COM NETWORK
ಮದ್ರಾಸ್: ಎಂಐ-17ವಿ5 ಸೇನಾ ಹೆಲಿಕಾಪ್ಟರ್ ಪತನವಾಗಿ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮತ್ತು ಪತ್ನಿ ಸಮೇತ 13 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆಂದು ಅಧಿಕೃತವಾಗಿ ಸೇನೆ ಘೋಷಿಸಿದೆ.
ಎಂಐ-17ವಿ5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಊಟಿಯ ಕೂನೂರ್ ಬಳಿ ಪತನವಾಗಿದೆ. ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ.
ಹೆಲಿಕಾಪ್ಟರ್ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 13 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್ ರಾವತ್ ಅವರನ್ನು ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೇನಾ ಹೆಲಿಕಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್. ಲಿಡರ್, ಲೆಫ್ಟಿನೆಂಟ್ ಕರ್ನಲ್ ಹಜಿರ್ಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.