ಸ್ವಸಹಾಯ ಸಂಘಗಳ ಸದಸ್ಯರು ತರಬೇತಿಯಲ್ಲಿ ಭಾಗವಹಿಸುವುದರ ಮೂಲಕ ಜ್ಞಾನ ಪಡೆದು ಕೊಳ್ಳಬೇಕು : ಎಂ.ಎನ್.ಲಲಿತಾ ಶ್ರೀನಿವಾಸ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಸ್ವಸಹಾಯ ಸಂಘಗಳ ಸದಸ್ಯರು ತರಬೇತಿಯಲ್ಲಿ ಭಾಗವಹಿಸುವುದರ ಮೂಲಕ ಅಗತ್ಯವಾದ ಜ್ಞಾನ ಪಡೆದುಕೊಳ್ಳಬೇಕು ಎಂದು ಪುರಸಭಾಧ್ಯಕ್ಷ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು . ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವ ಸಹಾಯಕ ಸಂಘಗಳು ಹಾಗೂ ಪ್ರದೇಶ ಮಟ್ಟದ ಒಕ್ಕೂಟಗಳ ಸದಸ್ಯರಿಗೆ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ , ತರಬೇತಿ ಅಭಿವೃದ್ಧಿಗೆ ಪೂರಕವಾಗಿದೆ . ತರಬೇತಿ ಇಲ್ಲದ ಯಾವುದೇ ಕ್ಷೇತ್ರ ಸುಲಲಿತವಾಗಿ ಮುಂದೆ ಸಾಗಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು . ಪುರಸಭೆ ಮಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ , ಜೀವನೋಪಾಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಉದ್ದೇಶದಿಂದ ಹಾಗೂ ಸ್ವ ಸಹಾಯ ಸಂಘದ ಸದಸ್ಯರ ಕೈ ಬಲಪಡಿಸುವ ಆಶಯದಿಂದ ಈ ಅಭಿಯಾನ ನಡೆಸಲಾಗುತ್ತಿದೆ . ಅರ್ಹ ಫಲಾನುಭವಿಗಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು . ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಲಾಭದಾಯಕ ಚಟುವಟಿಕೆ ಕೈಗೊಳಬೇಕು ಎಂದು ಹೇಳಿದರು . ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ , ಕಂದಾಯ ನಿರೀಕ್ಷಕ ಶಂಕರ್ , ಮಿಷನ್ ವ್ಯವಸ್ಥಾಪಕ ಎನ್.ಗೋವಿಂದಮೂರ್ತಿ , ಸಮುದಾಯ ಸಂಘಟನಾಧಿಕಾರಿಗಳಾದ ಮಂಜುನಾಥ್ , ಕೆ.ಎನ್.ರಾಜೇಶ್ವರಿ , ಬೀಬಿ ಕುತೇಜ , ಶಶಿಕುಮಾರ್ ಇದ್ದರು.