ಆದಿಜಾಂಬವ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ಮುಖ್ಯಮಂತ್ರಿಗಳ ಭೇಟಿ- ಕೆ.ಎಚ್.ಮುನಿಯಪ್ಪ ಸ್ಪಷ್ಟನೆ

ಕೋಲಾರ : – ರಾಜ್ಯ ಆರೋಗ್ಯ ಸಚಿವ ಸುಧಾಕರ್‌ ಜತೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು , ಬಿಜೆಪಿ ಸೇರಲಿದ್ದಾರೆ ಎಂದು ಹರಡಿರುವ ವದಂತಿಗಳನ್ನು ಖಂಡಿಸಿ ಸ್ಪಷ್ಟನೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಇದನ್ನು ತಳ್ಳಿ ಹಾಕಿದ್ದು , ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ . ಆದಿ ಜಾಂಬವ ಸಮುದಾಯದ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಿಎಂರನ್ನು ಭೇಟಿಯಾಗಿದ್ದಾಗಿ ಸ್ಪಷ್ಟಪಡಿಸಿದ ಅವರು , ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಈ ಸಮುದಾಯದ ಜನರ ಬೇಡಿಕೆಗಳ ಕುರಿತು ಸಿಎಂ ಗಮನಕ್ಕೆ ತರಲು ಹೋಗಿದೆ ಎಂದು ತಿಳಿಸಿದ್ದಾರೆ . ಅದರಂತೆ ಜಿಲ್ಲೆಯ ಆವಣಿ ಪುಣ್ಯಕ್ಷೇತ್ರದಲ್ಲಿ ಆದಿಜಾಂಬವಸ್ವಾಮಿ ದೇವಾಲಯ , ಮಾತಂಗಮುನಿ ಅರುಂಧತಿ ಮಾತೆಯ ಸಮುದಾಯ ಭವನಕ್ಕೆ ೫ ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಮುಳಬಾಗಿಲು ತಾಲ್ಲೂಕಿನ ಕೆಲವು ಸಮುದಾಯದ ಮುಖಂಡರೊಂದಿಗೆ ಸಿಎಂ ಭೇಟಿಯಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ .
ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ವರಕೊಂಡದ ಆದಿಜಾಂಬವ ಮಹಾ ಗುರು ಸಂಸ್ಥಾನಮಠಂ ಟ್ರಸ್ಟ್‌ಗೆ ಗ್ರಾಮದ ಸರ್ವೇ ನಂ . ೨೫೦ ರಲ್ಲಿ ೧೮.೩೦ ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡುವಂತೆ ಕೋರಿದ್ದು , ಅಲ್ಲಿನ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿರುವ ಹಿನ್ನಲೆಯಲ್ಲಿ ಸಚಿವ ಸುಧಾಕರ್‌ರೊಂದಿಗೆ ಕೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಮೀನು ಮಂಜೂರಾತಿಗೆ ಮನವಿ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ . ಆದರೆ ಈ ಭೇಟಿಯನ್ನು ಕೆಲವರು ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂದು ವದಂತಿ ಹಬ್ಬಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು , ತಾವು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿದ್ದು , ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಆಲೋಚನೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
.