ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಪತ್ರಕರ್ತರು ಅಪಾಯ ಲೆಕ್ಕಿಸದೇ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ, ಸಂಕಷ್ಟದಲ್ಲಿದ್ದ ವಿವಿಧ ವರ್ಗಗಳ ನೆರವಿಗೆ ಸರ್ಕಾರ ನಿಲ್ಲುವಂತೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಶ್ಲಾಘಿಸಿದರು.
ಮಂಗಳವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಕೋವಿಡ್-19: ಸರ್ಕಾರ ಮತ್ತು ಮಾಧ್ಯಮ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾನು ಕೋಲಾರ ಜಿಲ್ಲೆಯ ಅಳಿಯ ಮಾತ್ರವಲ್ಲ, ಗೆಳೆಯನೂ ಆಗಿದ್ದೇನೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ನೂರಾರು ಪತ್ರಕರ್ತರು ಕೆಲಸ ಕಳೆದಕೊಂಡಿದ್ದಾರೆ, ಇಡೀ ಪ್ರಪಂಚವನ್ನೇ ಕೋವಿಡ್ ತಲ್ಲಣಗೊಳಿಸಿದೆ ಎಂದರು.
ಸಿದ್ದಸೂತ್ರವೂ ಇಲ್ಲ, ಸಿದ್ದೌಷಧಿಯೂ ಇಲ್ಲದೇ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ, ರೈತರು, ಹೂ ಬೆಳೆಗಾರರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ನೆರವಿಗೆ ಬಂದು ಜನರ ನೋವಿಗೆ ಮಾನವೀಯ ನೆಲಗಟ್ಟಿಯಲ್ಲಿ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಿಸಿ
ಮಾಧ್ಯಮವನ್ನಲ್ಲ
ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮಾಧ್ಯಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ, ಆದ್ದರಿಂದಲೇ ನಾವು ನಿಷ್ಟೂರವಾಗಿ ಕೋವಿಡ್ ನಿಯಂತ್ರಿಸಿ ಮಾಧ್ಯಮವನ್ನಲ್ಲ ಎಂದು ನಿಷ್ಠೂರವಾಗಿ ಹೇಳಬೇಕಾಯಿತು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ಮಾಧ್ಯಮಗಳ ಬದ್ದತೆ ಇಂದು ಇಲ್ಲವಾಗಿದೆ ಎಂದು ವಿಷಾದಿಸಿ, ಮಾಧ್ಯಮ ಮತ್ತು ಸರ್ಕಾರ ಎರಡು ರೈಲು ಹಳಿಗಳಿದ್ದಂತೆ ಅದರ ಮೇಲೆ ಪ್ರಜಾಪ್ರಭುತ್ವದ ಸತ್ಪ್ರಜೆಗಳನ್ನು ತುಂಬಿದ ರೈಲು ಚಲಿಸುತ್ತದೆ ಹಳಿಗಳು ಅಲುಗಾಡಿದರೆ ಪ್ರಜಾಪ್ರಭುತ್ವವೇ ಅಲುಗಾಡುತ್ತದೆ ಎಂದರು.
ಮಾಧ್ಯಮಗಳು ಜನರ ಧ್ವನಿಯಾಗಿ ವಿಶ್ವಾರ್ಹತೆ ಉಳಿಸಿಕೊಳ್ಳಬೇಕು, ಸರ್ಕಾರ ಮತ್ತು ಆಡಳಿತ ಯಂತ್ರದ ಜತೆ ನಾವು ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಮುದ್ರಣ ಮಾಧ್ಯಮದ ವಿಶ್ವಾಸ ಶೇ.62ಕ್ಕೆ ಕುಸಿದಿದೆ, ರೇಡಿಯೋಗೆ 57ಕ್ಕೆ, ವಿದ್ಯುನ್ಮಾನ ಮಾಧ್ಯಮ ಇತ್ತೀಚೆಗೆ ಆರಂಭಗೊಂಡಿದ್ದರೂ ಆಗಲೇ ವಿಶ್ವಾಸರ್ಹತೆ 56ಕ್ಕೆ ಕುಸಿದಿದೆ ಇದು ಆತಂಕಕಾರಿ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಮಾಧ್ಯಮದ ಆದಾಯ ಶೇ.16 ಕುಸಿದಿದೆ, ವೇತನ ನೀಡಲಾಗದ ಸ್ಥಿತಿಗೂ ತಲುಪಿದೆ ಎಂದ ಅವರು, ವಿದ್ಯುನ್ಮಾನ ಮಾಧ್ಯಮಗಳು ಸಂಯಮದ ಭಾಷೆ ಬಳಸಬೇಕು, ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಬೇಸರ ವ್ಯಕ್ತಪಡಿಸಿ, ಜನರನ್ನು ಹೆದರಿಸಬೇಡಿ ಅರಿವು ಮೂಡಿಸಿ ಎಂದಿದ್ದನ್ನು ಸ್ಮರಿಸಿ ಆದ್ದರಿಂದ ವೃತ್ತಿ ಪಾವಿತ್ರ್ಯತೆಗೆ ಆತ್ಮಾವಲೋಕನ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕೋವಿಡ್ 1 ಮತ್ತು ರೂಪಾಂತರ ಕೋವಿಡ್ ಕುರಿತು ಭಯಾನಕ ಅವಲೋಕನ ನಡೆಯುತ್ತಿದೆ, ಇದು ಜನರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದ್ದು, ಮಾಧ್ಯಮಗಳು ವಸ್ತುನಿಷ್ಟ ವರದಿ ಮಾಡಿ ಜನರಿಗೆ ತಲುಪಿಸೋಣ ಎಂದರು.
ಕೋವಿಡ್ ಸಂದರ್ಭದಲ್ಲಿ ಸಿಎಂ ನಮಗೆ ಸ್ಪಂದನೆ ನೀಡಿದ್ದಾರೆ, ಸಣ್ಣಪತ್ರಿಕೆಗಳ ಉಳಿವಿಗಾಗಿ ಬಾಕಿ ಇದ್ದ ಜಾಹಿರಾತು ಮೊತ್ತ 56 ಕೋಟಿಯನ್ನು ಬಿಡುಗೆ ಮಾಡಿದರು ಎಂದು ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಇದ್ದಾಗ ಹೆಲ್ತ್ ಕಾರ್ಡ್‍ಗೆ ಬಜೆಟ್‍ನಲ್ಲಿ ತೋರಿಸಿದರೆ ಆದರೆ ಯಡಿಯೂರಪ್ಪ ನಮ್ಮ ಮನವಿಗೆ ಸ್ಪಂದಿಸಿ ಯೋಜನೆ ಜಾರಿ ಮಾಡಿದರು ಎಂದು ತಿಳಿಸಿ, ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಸಂಘ ಬದ್ದವಾಗಿದ್ದು, ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೂ ಸ್ಪಂದಿಸುವಪ್ರಯತ್ನ ಮಾಡುತ್ತಿದೆ ಎಂದರು.
ಬಿ.ಟಿವಿ ಸುದ್ಧಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ಸಂಪಾದಕ ಜಿ.ಎಂ ಕುಮಾರ್, ಭೃಂಗೇಶ್ ಮನಸ್ಸುಮಾಡಿ ಕೋಲಾರ ಪತ್ರಕರ್ತರಿಗೆ 10 ಎಕರೆ ಸರ್ಕಾರದ ಕಡೆಯಿಂದ ಮಂಜೂರು ಮಾಡಿಸಿ ಎಲ್ಲರಿಗೂ ನಿವೇಶನ ಸಿಗುವಂತೆ ಮಾಡಲಿ ಎಂದು ಆಶಿಸಿದರು.
ಉದಯವಾಣಿ ಮುಖ್ಯ ವರದಿಗಾರ ಎಸ್.ಲಕ್ಷ್ಮೀನಾರಾಯಣ,ಕೋವಿಡ್ ಸಂದರ್ಭದಲ್ಲೂ ಸುದ್ದಿಗಾಗಿ ಸವಾಲು ಸ್ವೀಕರಿಸಿ ಕೆಲಸ ಮಾಡಿದ್ದೇವೆ, ಲಾಕ್‍ಡೌನ್ ಪಾಠ ಕಲಿಸಿದೆ, ಪತ್ರಕರ್ತರು ತಮ್ಮ ಕೆಲಸದ ಜತೆಗೆ ಕುಟುಂಬ ಮತ್ತು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ವೃತ್ತಿ ಧರ್ಮ ಪಾಲಿಸಬೇಕು, ಈ ಸಂಘದಲ್ಲಿ ಹಿಂದೆ ಹಲವಾರು ಹಿರಿಯರು ದಾರಿ ತೋರಿದ್ದಾರೆ, ಸಂಘದ ನಿವೇಶನ ಮಾಡಿಕೊಟ್ಟು ಬೆಳೆಸಿದ್ದಾರೆ ಎಂದು ತಿಳಿಸಿ ಇದೀಗ ತಮ್ಮ ಅವಧಿಯಲ್ಲಿ ಮತ್ತಷ್ಟು ಅಭಿವೃದ್ದಿಯಾಗಿರುವ ಕುರಿತು ಮಾಹಿತಿ ನೀಡಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಶೇ.80 ಪತ್ರಕರ್ತರಿಗೆ ಸಂಬಳವಿಲ್ಲ, ನಾವು ಯಾರ ಬಳಿಯೂ ಕೈಚಾಚದೇ ಶಾಸಕ,ಸಂಸದರ ಅನುದಾನದಿಂದ ಕಟ್ಟಡ ಕಟ್ಟಿದ್ದೇವೆ, ಬಜೆಟ್‍ನಲ್ಲಿ ಎಲ್ಲಾ ಪತ್ರಕರ್ತರಿಗೂ ಆಂಧ್ರದ ಮಾದರಿಯಲ್ಲಿ ಹೆಲ್ತ್ ಕಾರ್ಡ್, ಬಸ್ ಪಾಸ್ ಒದಗಿಸಲು ರಾಜ್ಯ ಸಂಘ ಮತ್ತು ಭೃಂಗೀಶ್ ಅವರು ಸಹಕರಿಸಲಿ ಎಂದು ಆಶಿಸಿದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಪತ್ರಕರ್ತರ ನೆರವಿಗೆ ಸಂಘ ಬರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಅತಿಥಿಗಳನ್ನು ಕೋಲಾರ ಜಿಲ್ಲಾ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪ ಸ್ವಾಗತಿಸಿ, ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಾರ್ತಾಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ರಾಜ್ಯ ಸಂಘದ ಕಾರ್ಯಕಾರಿ ಸದಸ್ಯ ಮಹಮದ್ ಯೂನೂಸ್ ಸೇರಿದಂತೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಜರಿದ್ದರು. ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ನಾಡಗೀತೆ ಹಾಡಿದರು.