ಕೋಲಾರ,ಜ.03: ಪತ್ರಕರ್ತರಿಗೆ ವೃತ್ತಿ ಬದ್ಧತೆ ಇದ್ದರೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಇಂಥ ಸಂದರ್ಭದಲ್ಲಿ ಯಾವುದೇ ಲಾಬಿ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಹಾಬಿ ರಮೇಶ್ ಹಾಗೂ ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಓಂಕಾರ ಮೂರ್ತಿ ಅವರಿಗೆ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಜಿಲ್ಲೆಗೆ ಅಕಾಡೆಮಿ ಪ್ರಶಸ್ತಿಗಳು ಹೆಚ್ಚಾಗಿ ಸಿಗುತ್ತಿವೆ. ಜಿಲ್ಲೆಯ ಮೂವರಿಗೆ ಲಭಿಸಿರುವ ಈ ಪುರಸ್ಕಾರಗಳು ಯುವ ಪತ್ರಕರ್ತರಿಗೆ ಸ್ಫೂರ್ತಿ ಆಗಬೇಕು. ತಾವೂ ಅವರ ಮಟ್ಟಕ್ಕೆ ಬೆಳೆಯಬೇಕೆಂಬ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಮಹಮದ್ ಯೂನಸ್ ಮಾಧ್ಯಮ ಅಕಾಡೆಮಿ ಸದಸ್ಯರಾದ ನಂತರ ಕೋಲಾರದ ಪತ್ರಕರ್ತರೂ ಸೇರಿದಂತೆ ಗ್ರಾಮೀಣ ಪತ್ರಕರ್ತರಿಗೂ ಸಹ ಅಕಾಡೆಮಿ ಪ್ರಶಸಿಗಳು ಲಭಿಸುತ್ತಿವೆ ಎಂದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು ಮಾತನಾಡಿ, ಪ್ರಶಸ್ತಿ ಘೋಷಣೆಯಾದ 24 ಗಂಟೆಯಲ್ಲಿ ಸಂಘವು ಸನ್ಮಾನ ಕಾರ್ಯಕ್ರಮ ಇಟ್ಟು ಕೊಂಡಿದೆ. ಇದು ತನ್ನ ಸದಸ್ಯರಿಗೆ ತೋರುವ ಗೌರವವಾಗಿದೆ. ನಾವು ಮಾಡುವ ಕೆಲಸ, ಚಟುವಟಿಕೆ, ಶ್ರಮ ನೋಡಿ ಪ್ರಶಸ್ತಿಗಳು ಬರುತ್ತವೆ. ಈ ಪ್ರಶಸ್ತಿಯಿಂದ ಉಳಿದವರಿಗೆ ಮತ್ತಷ್ಟು ಸ್ಫೂರ್ತಿ ಸಿಗಲಿ ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಹಿಂದೆ ಜಿಲ್ಲೆಗೆ ಅಕಾಡೆಮಿ ಪ್ರಶಸ್ತಿ ಬರುವುದೇ ಅಪರೂಪವಾಗಿತ್ತು. ಪೊನ್ನಪ್ಪ ಅವರು ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿದ್ದ ಸಮಯದಿಂದ ಸಾಮಾಜಿಕ ನ್ಯಾಯ ಸಿಗುತ್ತಿದೆ. ಪ್ರತಿ ವರ್ಷ ಜಿಲ್ಲೆಗೆ ಈ ರೀತಿ ಪ್ರಶಸ್ತಿಗಳು ಬರುತ್ತಿರಬೇಕು. ಈ ಪ್ರಶಸ್ತಿ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಪ್ರೇರಣೆಯಾಗಲಿ’ ಎಂದರು.
ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೂವರಿಗೆ ಪ್ರಶಸ್ತಿ ಒಲಿದಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಚಾರ. ಓಂಕಾರ ಮೂರ್ತಿ ಜಿಲ್ಲೆಯ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು; ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ ವಿಶೇಷ ವರದಿಗೆ ಪ್ರಶಸ್ತಿ ಲಭಿಸಿದೆ. ಇಂಥ ವರದಿಗಳು ಎಲ್ಲರಿಂದ ಬರಲಿ ಎಂದು ಆಶಿಸಿದರು.
ಪಾ.ಶ್ರೀ.ಅನಂತರಾಮ್, ಬಿ.ಸುರೇಶ್, ಕೋಲಾರ ನ್ಯೂಸ್ ಚಂದ್ರು ಮಾತನಾಡಿದರು.
ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಭಾಜನರಾಗಿರುವ ವಾಸುದೇವ ಹೊಳ್ಳ, ಹಾಬಿ ರಮೇಶ್ ಹಾಗೂ ಅಭಿಮಾನಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಓಂಕಾರ ಮೂರ್ತಿ ತಮ್ಮ ಅನಿಸಿಕೆ ಹಂಚಿಕೊಂಡರು.
ಕೋ.ನಾ.ಪ್ರಭಾಕರ್ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಸಿ.ಜಿ.ಮುರಳಿ ಸ್ವಾಗತಿಸಿದರು. ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡಿದ್ದರು.