ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : – ಅವಿಭಜಿತ ಜಿಲ್ಲೆಯಲ್ಲಿ ಜಲಪ್ರಳಯದಿಂದ ರೈತರ ಬೆಳೆಗಳು ಪೂರ್ಣ ನೆಲಕಚ್ಚಿದ್ದು , ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಗ್ರಹಿಸಿದರು . ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಬೆಳೆದ ದಾಳಿಂಬೆ , ಟಮೋಟೋ , ಕ್ಯಾಪಿಕಾಂ , ರಾಗಿ , ರೇಷ್ಮೆ ಸೇರಿದಂತೆ ಎಲ್ಲಾ ಬೆಳೆಗಳು ಭಾರಿ ಮಳೆಯಿಂದ ನಾಶವಾಗಿದ್ದು , ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು . ಜಿಲ್ಲೆಯ ರೈತರು ನೀರಿಲ್ಲದೇ ಬರದ ನಾಡಲ್ಲಿ ಒದ್ದಾಡಿದ್ದರು . ಈಗ ನೀರಿನಲ್ಲೇ ತಮ್ಮ ಜೀವನ ನಾಶವಾಗುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ . ಕೇಂದ್ರ , ರಾಜ್ಯ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು . ಕಷ್ಟದಲ್ಲೂ ಬೆಳೆ ಬೆಳೆದಿದ್ದ ರೈತರು ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದ ರೀತಿಯಲ್ಲಿ ಹವಮಾನ ವೈಪರಿತ್ಯದಿಂದ ರಕ್ತಸ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ ಮೌಲ್ಯದ ಬೆಳೆಗಳು ಹಾಳಾಗಿ ರೈತರ ಬದುಕು ಬೀದಿಗೆ ಬಂದಿದೆ ಎಂದು ವಿಷಾದಿಸಿದರು . ಕೆಲವಡೆ ಮನೆಗಳು , ಶಾಲೆಗಳು ನೆಲಕಚ್ಚಿವೆ . ಕೆರೆ ಕಟ್ಟೆಗಳು ಅಪಾಯದಂಚಿನಲ್ಲಿದ್ದು ಅವುಗಳನ್ನು ಕೊಡಲೇ ದುರಸ್ತಿ ಮಾಡುವ ಮೂಲಕ ಜಲಸಂಪನ್ಮೂಲವನ್ನು ಉಳಿಸಿ ಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು
ಜಿಲ್ಲೆಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಿಯೋಜಿಸಿ ಬೆಳೆಗಳ ನಷ್ಟವನ್ನು ಸಮೀಕ್ಷೆ ನಡೆಸುವ ಮೂಲಕ ಅಂದಾಜಿಸಿ ಕನಿಷ್ಟ ಬೆಳೆಗಳಿಗೆ ಹಾಕಿರುವ ಬಂಡಾವಳವನ್ನಾದರೂ ಪರಿಹಾರ ರೂಪದಲ್ಲಿ ನೀಡಿದರೆ ಅವರ ಜೀವನವು ಸುಧಾರಣೆಯಾಗಲಿದೆ . ಬೆಳೆಗಳಿಗೆ ಮಾಡಿರುವ ಸಾಲ ಮರುಪಾವತಿಸಿ ನೆಮ್ಮದಿಯ ನಿಷ್ಟುಸಿರು ಬಿಡಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು . ಜಿಲ್ಲೆಯ ಜನಪತಿನಿಧಿಗಳು ಈ ಕುರಿತು ಸರ್ಕಾರದ ಗಮನ ಸೆಳೆಯುವಂತಾಗ ಬೇಕೆಂದು ಮನವಿ ಮಾಡಿದ್ದಾರೆ .
ನನಗೆ ರಾಜಕೀಯಕ್ಕಿಂತ ಜನತೆ ನೀಡಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಮುಖ್ಯವಾಗಿದೆ . ನನ್ನ ಅಧಿಕಾರದ ಅವಧಿಯವರೆಗೆ ನಾನು ಬ್ಯಾಂಕಿನ ಕಾವಲುಗಾರನಾಗಿ ಬಡ ರೈತರ ಮತ್ತು ಮಹಿಳೆಯರ ಪರವಾಗಿ ದುಡಿಯುವುದು ನನ್ನ ಮುಖ್ಯ ಧೈಯವಾಗಿದೆ ಎಂದರು . ದಿವಾಳಿ ಅಂಚಿನಲ್ಲಿದ್ದ ಬ್ಯಾಂಕ್‌ನ್ನು ಎಲ್ಲರ ಸಹಕಾರದಿಂದ ರಾಜ್ಯದಲ್ಲಿ ನಂಬರ್ ಓನ್ ಸ್ಥಾನಕ್ಕೆ ತಂದಿರುವ ತೃಪ್ತಿ ಸಿಕ್ಕಿದೆ.ಇಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಜನಪ್ರಿಯ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ.ನನಗೆ ಇದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಕೆ.ಎ.ದಯಾನಂದ್ , ಸಹಕಾರಿ ಯೂನಿಯನ್ ನಿರ್ದೇಶಕ ಮೂರಂಡಹಳ್ಳಿ ಗೋಪಾಲ್ ಮುಂತಾದವರು ಹಾಜರಿದ್ದರು .