ಶ್ರೀನಿವಾಸಪುರ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಮಾತೃ ಹೃದಯದ ಮಾತೃಶ್ರೀ ಹೇಮಾವತಿ ಅಮ್ಮನವರ ಕೊಡುಗೆ ಆಪಾರ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.
ಪಟ್ಟಣದ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರಮಹಾಲಕ್ಷ್ಮೀ ವ್ರತ ಶ್ರೇಷ್ಠವಾದ ಹಾಗೂ ಅತ್ಯಂತ ಪವಿತ್ರವಾದ ವೃತ… ಲಕ್ಷ್ಮೀದೇವಿಯೂ ಅಷ್ಟಲಕ್ಷ್ಮೀಯಾಗಿ ಈ ಮನುಷ್ಯನಿಗೆ ಬೇರೆ ಬೇರೆ ಅವತಾರದಲ್ಲಿ ಅನುಗ್ರಹವನ್ನು ನೀಡುತ್ತಾರೆ. ಇವತ್ತು ಜನ ಸಾಮಾನ್ಯರಲ್ಲಿ ದೇವರ ಮೇಲಿನ ಭಕ್ತಿ ಕಡಿಮೆ ಆಗುತ್ತಿದ್ದು ರಾಜ್ಯಾದ್ಯಂತ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆಯಲ್ಲಿ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ.
ನೂರಾರು ದಾರಿಗಳಿವೆ. ಮೊದಲು ಕಲಿಯುವ ಆಸಕ್ತಿ ಬೇಕು.. ಧರ್ಮಸ್ಥಳ ಸಂಸ್ಥೆಯ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಬೇರೆ ಬೇರೆ ಸ್ವ ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಸುತ್ತಿದ್ದು ಇವತ್ತು ಲಕ್ಷಾಂತರ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ತಾ.ಪಂ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿರವರು ಮಾತನಾಡುತ್ತಾ ಪೂಜ್ಯರ ಹಾಗೂ ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಸಂಸ್ಥೆಯೂ ಸಮಾಜದ ದುರ್ಬಲ ವರ್ಗದವರ ಏಳಿಗೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಈ ಸಂಸ್ಥೆಯಲ್ಲಿ ನಾನು ಒಬ್ಬ ಸದಸ್ಯೆ ಎನ್ನುವುದು ಹೆಮ್ಮೆಯಾಗುತ್ತಿದೆ ಎಂದರು. ಹಾಗೂ ವರಮಹಾಲಕ್ಷ್ಮೀ ಪೂಜೆಯ ವಿಶೇಷತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರಿಂದ ಭಕ್ತಿಗೀತೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ಶ್ರೀಮತಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಸುರೇಖಾ ಸ್ವಾಗತಿಸಿ, ಮಂಜುಳಾ ವಂದನಾರ್ಪಣೆ ಸಲ್ಲಿಸಿದರು.ವಲಯ ಮೇಲ್ವಿಚಾರಕಿ ಯಶೋಧಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ರಂಜಿತಾ, ಸೇವಾಪ್ರತಿನಿಧಿ ಜಗದಂಬಿಕಾ ಉಪಸ್ಥಿತರಿದ್ದರು.