ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು

ವರದಿ:ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು. ಪುರುಷ ಹಾಗೂ ಮಹಿಳಾ ಮತದಾರರು ಮತಗಟ್ಟೆಗಳ ಮುಂದೆ ಅಂತರ ಪಾಲನೆಯೊಂದಿಗೆ ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.   ಒಟ್ಟು 1,42,229 ಮತದಾರ ಪೈಕಿ, 123095 ಮತದಾರರು ಮತದಾನ ಮಾಡಿದ್ದಾರೆ. ಅದರಲ್ಲಿ ಮತದಾನ ಮಾಡಿರುವ 62803 ಪುರುಷ ಹಾಗೂ 60767 ಮಹಿಳಾ ಸೇರಿದ್ದಾರೆ. ತಾಲ್ಲೂಕಿನಲ್ಲಿ ಶೇ.88.68ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ತಿಳಿಸಿದರು.  ಮತಾದಾರರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಸರತಿ ಸಾಲಿನಲ್ಲಿ ಕಡ್ಡಾಯವಾಗಿ ಅಂತರ ಪಾಲನೆ ಮಾಡುವಂತೆ ಸೂಚಿಸಲಾಗಿತ್ತು. ಪ್ರತಿ ಮತದಾನ ಕೇಂದ್ರದಲ್ಲೂ ಆರೋಗ್ಯ ಇಲಾಖೆ ವತಿಯಿಂದ ಮತದಾರರ ಕೈಗೆ ಸ್ಯಾನಿಟೈಸರ್‌ ಹಾಕಲಾಯಿತು.  ತಾಲ್ಲೂಕಿಲ್ಲಿ ಚುನಾವಣೆ ನಡೆದ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ 253 ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು1265 ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಮತಗಟ್ಟೆಗಳ ರಕ್ಷಣೆ ಹಾಗೂ ಸುವ್ಯವಸ್ಥೆ ಪಾಲನೆಗೆ 350 ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು. ಮತದಾನ ಮುಗಿದ ಬಳಿಕ ಮತ ಪೆಟ್ಟಿಗೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸೀಲ್‌ ಮಾಡಿ, ಪಟ್ಟಣದ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿದ್ದ ಸ್ವೀಕರಣ ಕೇಂದ್ರದಲ್ಲಿ ನೀಡಲಾಯಿತು.