ಮಾಸ್ತಿ ಬದುಕು ಬರಹ ಒಂದೇ ಆಗಿತ್ತು -ರುದ್ರೇಶ್ ಅದರಂಗಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರ ಬದುಕು ಮತ್ತು ಬರಹ ಒಂದೇ ಆಗಿತ್ತು ಎಂದು ಬೆಂಗಳೂರು ಸರಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ರುದ್ರೇಶ್ ಅದರಂಗಿ ಹೇಳಿದರು . ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ , ಕನ್ನಡ , ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಸ್ತಿ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ತಮಿಳು ಮಾತೃಭಾಷೆಯ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತಮಿಳು , ತೆಲುಗು ಪ್ರಭಾವದ ಭಾಷಾ ಪ್ರಾಂತ್ಯದಲ್ಲಿ ವಾಸವಾಗಿದ್ದರೂ , ಸಾಹಿತ್ಯ ಕೃಷಿಯ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದರು , ಬೇಂದ್ರೆ ಮತ್ತು ಕುವೆಂಪುರ ಮೊದಲ ಕವನ ಸಂಕಲನಗಳನ್ನು ಮಾಸ್ತಿಯವರೇ ಪ್ರಕಟಿಸಿದ್ದರೆಂದು ವಿವರಿಸಿದರು . ವಿದ್ಯಾರ್ಥಿ ದೆಸೆಯಲ್ಲಿ ಮೈಸೂರಲ್ಲಿ ವಾರನ್ನಾದ ಮೂಲಕ ವಿದ್ಯಾಭ್ಯಾಸ ಮುಂದುವರೆಸಿದ್ದ ಮಾಸ್ತಿಯವರು ಬಡ ಜನರ ಹಸಿವು ನೀಗಿಸಲು ಪಣತೊಟ್ಟಿದ್ದರು . ಸ್ವಾಭಿಮಾನದ ಪ್ರತೀಕವಾಗಿದ್ದ ಮಾಸ್ತಿಯವರಿಗೆ ದಕ್ಕಬೇಕಾಗಿದ್ದ ದಿವಾನ್ ಪಟ್ಟ ಕೈತಪ್ಪಿದ್ದರಿಂದ ಬೇಸರಪಟ್ಟು ತಮ್ಮ ಸರಕಾರಿ ಉನ್ನದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರೆಂದರು .
ಕೋಲಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೇಂದ್ರೆಯವರ ಉಪನ್ಯಾಸ ಕಾರ್ಯಕ್ರಮವನ್ನು ನಾಲೈದು ದಶಕಗಳ ಹಿಂದೆ ಏರ್ಪಡಿಸಿದ್ದರೆಂದು ವಿವರಿಸಿದ ಅವರು , ಜಗತ್ತಿನ ಯಾವುದೇ ಭಾಷೆಯಲ್ಲಿ ಇಲ್ಲದ ಕನ್ನಡ – ಕನ್ನಡ ನಿಘಂಟಿನ ಸಲಹಾ ಸಂಪಾದಕರಾಗಿ ಕೃತಿ ಹೊರ ತರಲು ಶ್ರಮಿಸಿದ್ದರೆಂದರು . ಮಾಸ್ತಿಯವರ ಕಥೆಗಳ ಶೇ .೯೦ ರಷ್ಟು ಪಾತ್ರಗಳು ತಳವರ್ಗಕ್ಕೆ ಸೇರಿದ್ದವೇ ಆಗಿದ್ದವೆಂದು ಹೇಳಿದ ಅವರು , ಕಥನ ಕವನ ಶೈಲಿಯಲ್ಲಿ ಬರವಣಿಗೆ ಆರಂಭಿಸಿದ್ದವರು ಇವರೇ ಆಗಿದ್ದರು , ಶೂದ್ರ ತಪಸ್ವಿ ಕೃತಿ ಕುರಿತಂತೆ ಕುವೆಂಪು ಮತ್ತು ಮಾಸ್ತಿ ನಡುವೆ ವಿವಾದ ಏರ್ಪಟ್ಟಿತ್ತಾದರೂ , ಅದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಚರ್ಚೆ ಮಾತ್ರವಾಗಿತ್ತು ಎಂದಿಗೂ ವ್ಯಯಕ್ತಿಕ ಮಟ್ಟಕ್ಕಿಳಿದಿರಲಿಲ್ಲವೆಂದರು . ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಮಾತನಾಡಿ , ಮಾಸ್ತಿ ಕೋಲಾರ ಜಿಲ್ಲೆಯವರೆಂಬ ಹೆಮ್ಮೆಯ ಜೊತೆಗೆ ಅವರ ಹುಟ್ಟೂರಿನಲ್ಲಿ ಅಧ್ಯಯನ ಕೇಂದ್ರ ಆರಂಭಿಸಿ ನಿತ್ಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು , ಹೊಸ ಪೀಳಿಗೆಯ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾಸ್ತಿಯವರ ಸಾಹಿತ್ಯ ಬದುಕು ಬರಹಗಳ ಪರಿಚಯ ಮಾಡಿಕೊಡಬೇಕು , ಕವಿಶೈಲದ ಮಾದರಿಯಲ್ಲಿ ಮಾಸ್ತಿ ಅಭಿವೃದ್ಧಿ ಹೊಂದಬೇಕಿದೆ ಎಂದರು .
ಸಹ ಪ್ರಾಧ್ಯಾಪಕ ಲೇಖಕ ಡಾ.ಆರ್‌.ಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ , ಮಾಸ್ತಿ ಕನ್ನಡಿಗರ ಆಸ್ತಿಯಾಗಿದ್ದಾರೆ , ಸಣ್ಣ ಕಥೆಗಳ ಜನಕರಾಗಿದ್ದಾರೆ . ಇವರು ಜನನವಾಗಿದ್ದು , ನಿಧನರಾಗಿದ್ದು ಜೂ .೬ ರಂದೇ , ಇದರೊಂದಿಗೆ ದೇವರಾಜ ಅರಸು ಮತ್ತು ಡಾ.ಎಚ್.ನರಸಿಂಹಯ್ಯರ ಪುಣ್ಯ ಸ್ಮರಣೆ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಕಸಾಪ ಆಶ್ರಯದಲ್ಲಿ ಕಾಲೇಜಿನಲ್ಲಿ ಆಚರಿಸಲಾಗುತ್ತಿದೆಯೆಂದರು . ಅಧ್ಯಕ್ಷತೆವಹಿಸಿದ್ದ ಎ.ಸಿ.ಸಂಪತ್‌ಕುಮಾರ್‌ ಮಾತನಾಡಿ , ಸುಮಾರು ೨೬ ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿದ್ದ ಮಾಸ್ತಿಯವರು , ೧೯೧೪ ರಲ್ಲಿಯೇ ಇಂಗ್ಲೀಷ್‌ನಲ್ಲಿ ಎಂ.ಎ ಪದವಿ ಪಡೆದುಕೊಂಡಿದ್ದರು . ಕನ್ನಡದಲ್ಲಿ ೧೨೩ ಮತ್ತು ಇಂಗ್ಲೀಷ್‌ನಲ್ಲಿ ೧೭ ಕೃತಿಗಳನ್ನು ವಿವಿಧ ಪ್ರಾಕಾರಗಳಲ್ಲಿ ರಚಿಸಿದ್ದಾರೆ , ಇವರ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಮತ್ತು ಸಮಾಜಮುಖಿ ಚಿಂತನೆಗಳಿದ್ದವು ಎಂದು ವಿವರಿಸಿದರು . ಪ್ರಾಧ್ಯಾಪಕ ರಾಮಕೃಷ್ಣ ಮಾತನಾಡಿ , ಮಾಸ್ತಿಯವರ ಸಾಹಿತ್ಯದಿಂದ ಬದುಕು ಕಟ್ಟಿಕೊಳ್ಳುವ ಆಶಯಗಳಿವೆಯೆಂದರು . ಇದೇ ಸಂದರ್ಭದಲ್ಲಿ ಬ್ಯಾಂಕ್ ಪಡೆದ ವಿದ್ಯಾ , ಕಾಲೇಜಿನಿಂದ ವರ್ಗಾವಣೆಯಾಗಿರುವ ಡಾ.ಮೂರ್ತಿ , ಮಂಜುನಾಥ್ , ಸಮಾಜ ಸೇವಕ ವಿಶ್ವನಾಥ್ ಮತ್ತು ಮಾಸ್ತಿಕುರಿತು ಉಪನ್ಯಾಸ ನೀಡಿದ ರುದ್ರೇಶ್ ಅದರಂಗಿಯವರನ್ನು ಸನ್ಮಾನಿಸಲಾಯಿತು .
ಹಿರಿಯ ಕನ್ನಡಿಗ ಸುಲೇಮಾನ್ ಖಾನ್‌ರಿಂದ ಪರಿಸರ ಗೀತೆ ಗಾಯನ ನೆರವೇರಿತು . ಸೋನಿಯಾ ನಿರೂಪಿಸಿ , ಬಾಬು ಸ್ವಾಗತಿಸಿ , ಮಹೇಂದ್ರ ವಂದಿಸಿದರು . ವೇದಿಕೆಯಲ್ಲಿ ಹಿರಿಯರಾದ ಎ.ವಿ.ರೆಡ್ಡಿ , ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಸ್.ಮುರಳೀಧರ್ , ಲಕ್ಷ್ಮೀನಾರಾಯಣ್ , ರಮೇಶ್ , ಶಿವಪ್ಪ ಅರಿವು , ಅನಂತ ಮೂರ್ತಿ , ಲೋಕೇಶ್ , ಕೆ.ಎನ್.ಶ್ರೀನಿವಾಸಮೂರ್ತಿ , ಕಸಾಪ ಕೋಶಾಧ್ಯಕ್ಷ ವಿನಯ್‌ಗಂಗಾಪುರ ಇತರರು ಹಾಜರಿದ್ದರು