ಕುಂದಾಪುರ: ಅಮಾನುಷವಾಗಿ ಹತ್ಯೆಯಾದ ನಮ್ಮೆಲ್ಲರ ಮನೆ ಮಗಳಾದ ಸೌಜನ್ಯ ಅವರಿಗೆ ನ್ಯಾಯ ಒದಗಿಸಬೇಕು ಎನ್ನುವ ಉದ್ದೇಶಕ್ಕಾಗಿ ಆರಂಭಿಸಲಾದ ಜನಶಕ್ತಿಯ ಹೋರಾಟ, ನಾಡಿನಾದ್ಯಂತ ವಿಸ್ತರಣೆಯಾಗಲಿದೆ. ಈ ಅನ್ಯಾಯದ. ವಿರುದ್ಧ: ನಾವು: ಮಾತನಾಡಿದರೆ ನಮ್ಮಮೇಲೆ ಪ್ರಕರಣ ದಾಖಲಾಗುತ್ತದೆ. ಹೀಗಾಗಿ ಜನ ಸಮೂಹವೇ ಈ ಕುರಿತು ಮಾತನಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ. ಹೇಳಿದ್ದಾರೆ.
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಶನಿವಾರ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಸನಾತನ ಹಿ೦ದೂ ಧರ್ಮದ ಮಗಳಿಗಾದ ಅನ್ಯಾಯದ ವಿರುದ್ಧ ಸಮಸ್ತ ಸಮಾಜ ಒಂದಾಗಿ ನಿಲ್ಲಬೇಕಾಗಿದೆ. ಸೌಜನ್ಯ ಹತ್ಯೆಯನ್ನು ಮಾಡಿದ ಪಾಪಿಗಳನ್ನು ಕಾನೂನಿನ ಚೌಕಟ್ಟಿನ ಒಳಗೆ ಕಳುಹಿಸಲಾಗದ ಅಸಮರ್ಥರು ನಾವಾಗಬಾರದು ಎನ್ನುವ ಉದ್ದೇಶದಿಂದ ನ್ಯಾಯಕ್ಕಾಗಿ ಜನತಾ ದೇಗುಲದಲ್ಲಿ ನ್ಯಾಯದ ಬಾಗಿಲು ತಟ್ಟುತ್ತಿದ್ದೇವೆ. ನಾಡಿನ ಜನರೇ ಆಕೆಯನ್ನು ಕೊ೦ದವರು ಯಾರು ಎನ್ನುವುದನ್ನು ತೀರ್ಮಾನ ಮಾಡಲಿ ಎಂದು ಅವರು ಹೇಳಿದರು.
ಯಾವುದೇ ಕಾನೂನಿನ ಮನೆಬಾಗಿಲನ್ನು ತಟ್ಟುವುದಿಲ್ಲ. ಜನಸಮೂಹದ ಮನೆಬಾಗಿಲನ್ನು ತಟ್ಟುತ್ತಿದ್ದೇವೆ. ಜನಗಳ ಮುಂದೆ ಹೋಗಿ ಸತ್ಯವನ್ನು ಹೇಳುತ್ತೇವೆ. ಸೌಜನ್ಯಳನ್ನು ಕೊಂದವರು ಯಾರು ಎಂದು ಜನಗಳೇ ಇಂದು ತೀರ್ಮಾನ ಮಾಡಬೇಕು. ಅಧರ್ಮ ಮಾಡುವ ಯಾವ ಪಾಪಿಯೂ ಈ ಮಣ್ಣಲ್ಲಿ ಬದುಕಬಾರದು. ಸನಾತನ ಹಿಂದೂ ಧರ್ಮದ ತಳಪಾಯ ಇಂದು ಅತ್ಯಾಚಾರದ ಕೂಪಕ್ಕೆ ಬಲಿಯಾಗುತ್ತಿದೆ. ಇದರ ವಿರುದ್ದ ಇಡೀ ಹಿಂದೂ ಸಮಾಜ ಎದ್ದು ಉತ್ತರಿಸಬೇಕು. ಜನಗಳ ತೀರ್ಮಾನದ ಮುಂದೆ ಯಾವುದು ಕೂಡ ನಿಲ್ಲುವುದಿಲ್ಲ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಹನ್ನೊಂದು ವರ್ಷದ ಹಿಂದೆ ನಮ್ಮ ವಿರುದ್ದ ಪ್ರತಿಭಟನೆಗಳಾದ ಅತೀ ಹೆಚ್ಚು ಜನರು ಆಗಮಿಸಿದ್ದು ಕುಂದಾಪುರದವರು. ಹನ್ನೊಂದು ವರ್ಷಗಳ ಬಳಿಕ ನ್ಯಾಯದೇವತೆ ಅಣ್ಣಪ್ಪ, ಮಂಜುನಾಥ ಸ್ವಾಮಿ ನಿಮ್ಮೆಲ್ಲರ ಕಣ್ಣು ತೆರೆಸಿದ್ದಾರೆ. ಸತ್ಯದ ಸ್ವರೂಪವನ್ನು ಇಲ್ಲಿ ಕಾಣುತ್ತಿದ್ದೇನೆ. ಸೌಜನ್ಯ ಪರ ಪ್ರತಿಭಟನೆಗಳು ತೀವ್ರಗೊಂಡ ಬಳಿಕ ಗ್ರಾಮ-ಗ್ರಾಮಗಳ ದೇವಸ್ಥಾನಗಳಿಗೆ ಹಣ ಕೊಟ್ಟು ದೇವಸ್ಥಾನದ ಮಂಡಳಿಯನ್ನು ಖರೀದಿ ಮಾಡುತ್ತಿರುವುದು ಆರಂಭವಾಗಿದೆ. ಭಕ್ತಿಯ ಶಿಖರ ಧರ್ಮಸ್ಥಳದ ವಿರುದ್ದ ನಾವು ಸುಳ್ಳು ಹೇಳಿದ್ದರೆ ಇಷ್ಟೊತ್ತಿಗಾಗಲೇ ಸತ್ತು ಮಣ್ಣಾಗುತ್ತಿದ್ದೆವು ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನನ್ನು ಧರ್ಮಸ್ಥಳಕ್ಕೆ ಬರಲು ಬಿಡುವುದಿಲ್ಲ ಎಂದು ಅಲ್ಲಿನ ಮಹಿಳೆಯರು ಹೇಳಿಕೆ ನೀಡಿದ್ದನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಧರ್ಮಸ್ಥಳ ಮಾತ್ರವಲ್ಲ, ಮಗಳಿಗೆ ನ್ಯಾಯ ಕೊಡಿಸಲು ಯಾರು ಪ್ರತಿಭಟನೆಗೆ ಕರೆಯುತ್ತಾರೋ ಅಲ್ಲಿಗೆ ಹೋಗಿಯೇ ಹೋಗುತ್ತೇನೆ. ಧರ್ಮಸ್ಥಳದಲ್ಲಿ ಮಗಳ ಸಾವಿನ ಕುರಿತಾದ ನ್ಯಾಯಕ್ಕಾಗಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವೆ. ಅತ್ಯಾಚಾರದ ಹಿಂದೆ ಯಾರಿದ್ದಾರೋ ಎಲ್ಲರಿಗೂ ಶಿಕ್ಷೆ ಕೊಡಿ ಎಂದು ಅಣ್ಣಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸಿ ಬರುವೆ. ಮಗಳ ಸಾವಿನ ಬಳಿಕ ಬದುಕುವ ವಿಶ್ವಾಸವನ್ನೇ ಕಳೆದುಕೊಂಡಿದ್ದೆವು. ಮಹೇಶಣ್ಣನ ಸತತ ಹೋರಾಟಗಳಿಂದ ನ್ಯಾಯ ಸಿಗುವ ನಂಬಿಕೆ ಇದೆ. ಇದೇ ಅಚಲವಾದ ನಂಬಿಕೆಯಿಂದ ಇಂದು ನಾವೆಲ್ಲಾ ಮನೆ-ಮಂದಿ ಬದುಕಿದ್ದೇವೆ. ನನ್ನ ಮಗಳಿಗಾದ ಅನ್ಯಾಯ ಯಾರ ಮನೆ ಮಗಳಿಗೂ ಆಗಬಾರದು. ಕೊನೆತನಕ ನೀವೆಲ್ಲರೂ ನಮ್ಮ ಜೊತೆಗಿರಿ ಎಂದು ಸೆರಗೊಡ್ಡಿ ಕಣ್ಣೀರಿಟ್ಟು ಬೇಡಿಕೊಂಡರು.
ಸೌಜನ್ಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಲಾಯಿತು. ಹೋರಾಟದ ಪ್ರಮುಖ ಸುಧೀರ್ ಮಲ್ಯಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಾಪ ಶೆಟ್ಟಿ ಉಳ್ತೂರು ನಿರೂಪಿಸಿದರು.
ಕುಂದಾಪುರದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯೊಂದಕ್ಕೆ ಸಾರ್ವಜನಿಕರು ಸಾಕ್ಷಿಯಾದರು. ತಾ.ಪಂ ಮುಂಭಾಗದ ಟ್ಯಾಕ್ಸಿ ನಿಲ್ದಾಣ, ಶಾಸ್ತ್ರೀವೃತ್ತದ ಆಟೋ ರಿಕ್ಷಾ ನಿಲ್ದಾಣವನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಿ ಪ್ರತಿಭಟನೆಗೆ ಸ್ಥಳವಕಾಶ ಮಾಡಿಕೊಡಲಾಯಿತು. ನಗರಕ್ಕೆ ಪ್ರವೇಶ ಕಲ್ಪಿಸುವ ಸರ್ವೀಸ್ ರಸ್ತೆಯ ಒಂದು ಪಾರ್ಶ್ವಕ್ಕೆ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದರು. ಪ್ರತಿಭಟನೆಗೆ ಬಂದ ಜನರ ಬೈಕ್, ಕಾರು ಹಾಗೂ ಇತರ ವಾಹನಗಳ ಪಾರ್ಕಿಂಗ್ ಆರ್.ಎನ್ ಶೆಟ್ಟಿ ಸಭಾಂಗಣದ ಪಾರ್ಕಿಂಗ್‍ನಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಕುಂದಾಪುರ-ಬೈಂದೂರಿನ ಮೂಲೆಮೂಲೆಗಳಿಂದಲೂ ಕಿತ್ತೆದ್ದು ಬಂದ ಜನಸಮೂಹಕ್ಕೆ ಸ್ಥಳಾವಕಾಶ ಸಾಲದೆ ಶಾಸ್ತ್ರೀವೃತ್ತದ ಅಕ್ಕ-ಪಕ್ಕದ ಮಹಡಿಗಳ ಮೇಲೆ, ಫ್ಲೈಓವರ್ ಮೇಲೆ ನಿಂತು ವೀಕ್ಷಿಸಿದ ದೃಶ್ಯಗಳು ಕಂಡುಬಂದವು. ಜನಾಗ್ರಹ ಸಭೆ ಆರಂಭಕ್ಕೂ ಮುನ್ನ ನೆಹರೂ ಮೈದಾನದಿಂದ ಆರಂಭಗೊಂಡ ಬೃಹತ್ ಪಾದಯಾತ್ರೆ ನಗರದ ಮಾಸ್ತಿಕಟ್ಟೆ ಜಂಕ್ಷನ್ ಸುತ್ತುವರಿದು ಬಳಿಕ ಶಾಸ್ತ್ರೀ ವೃತ್ತದಲ್ಲಿ ಸಮಾಪ್ತಿಗೊಂಡಿತು.
ಕುಂದಾಪುರದ ಡಿವೈಎಸ್ಪಿ ಬೆಳ್ಳಿಯಪ್ಪ, ಪ್ರೊಬೇಶನರಿ ಡಿವೈಎಸ್ಪಿ ರವಿ, ಉಡುಪಿ ನಗರ ಸಿಪಿಐ ಮಂಜಪ್ಪ, ಬ್ರಹ್ಮಾವರ ಸಿಪಿಐ ದಿವಾಕರ್, ಬೈಂದೂರು ಸಿಪಿಐ ಸವಿತ್ರ ತೇಜ್, ನಗರ ಠಾಣೆಯ ನಿರೀಕ್ಷಕ ನಂದಕುಮಾರ್, ನಗರ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ನಗರ ಅಪರಾಧ ವಿಭಾಗದ ಪಿಎಸ್‍ಐ ಪ್ರಸಾದ್, ವಿವಿಧ ಠಾಣೆಯ ಠಾಣಾಧಿಕಾರಿಗಳು ಹಾಜರಿದ್ದರು.