ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಜನರ ಸಮಸ್ಯೆ ಆಲಿಸಲು ಖುದ್ದು ಗ್ರಾಮಗಳಿಗೆ ತೆರಳಿ ಜನರ ನಡುವೆ ಬರಿನೆಲದಲ್ಲಿ ಕುಳಿತು ಕುಂದುಕೊರತೆ ಆಲಿಸಿ ಪರಿಹಾರ ಒದಗಿಸುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಯಿತು.
ಜನಪ್ರತಿನಿಧಿಗಳು ಎಂದರೆ ಎಸಿ ರೂಮಿನಲ್ಲಿ ಕುಳಿತು ಅಲ್ಲಿಂದಲೇ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದು ಮಾಮೂಲಿ ಆದರೆ ಶಾಸಕರೊಬ್ಬರು ಕ್ಷೇತ್ರದ ಕಟ್ಟಕಡೆಯ ಗ್ರಾಮಕ್ಕೂ ಖುದ್ದು ತೆರಳಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರ ನಡುವೆ ಕುಳಿತು ಸಮಸ್ಯೆ ಆಲಿಸುವುದು ಶ್ಲಾಘನೀಯ ಎಂದು ಗ್ರಾಮಸ್ಥರು ತಿಳಿಸಿದರು.
ಸರ್ಕಾರಿ ಜಾಗಅತಿಕ್ರಮ-ಪರಾಮರ್ಶೆ
ಜಿಲ್ಲೆಯ ಮಾರಿಕುಪ್ಪಂ ಗ್ರಾಮದಲ್ಲಿ ಆಂಧ್ರಮೂಲದ ವ್ಯಕ್ತಿಯೊಬ್ಬರು ಸರ್ಕಾರಿ ಜಮೀನು ಅತಿಕ್ರಮಿಸಿರುವ ದೂರಿನ ಹಿನ್ನಲೆಯಲ್ಲಿ ಖುದ್ದು ಗ್ರಾಮಕ್ಕೆ ತೆರಳಿ ಜನರ ನಡುವೆ ಬರಿ ನೆಲದಲ್ಲೇ ಕುಳಿತು ಸಮಸ್ಯೆಗೆ ಪರಿಹಾರದ ಭರವಸೆ ನೀಡಿದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಯಿತುಮಾರಿಕುಪ್ಪ ಗ್ರಾಮ ಪಂಚಾಯಿತಿಯ ನೀಲಿಗಿರಿಹಳ್ಳಿ ಗ್ರಾಮದ ಸರ್ಕಾರಿ ಸ.ನಂ.45 ರಲ್ಲಿ ಸುಮಾರು 20 ಎಕರೆ ಜಮೀನನ್ನು ಆಂದ್ರ ಮೂಲದ ವ್ಯಕ್ತಿಯೊಬ್ಬರು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು ಗ್ರಾಮಸ್ಥರು ಮಾನ್ಯ ಶಾಸಕರಿಗೆ ಮನವಿ ಮಾಡಿ ಗ್ರಾಮದ ಬಡವರಿಗೆ ಅನುಕೂಲ ಮಾಡಿಕೊಡಲು ಕೋರಿದ್ದರು.
ಈ ಹಿನ್ನಲೆಯಲ್ಲಿ ಇಂದು ಗ್ರಾಮಕ್ಕೆ ಆಗಮಿಸಿದ ಶಾಸಕಿ ರೂಪಕಲಾ ಎಂ ಶಶಿಧರ್ ನೀಲಿಗಿರಿಹಳ್ಳಿ ಗ್ರಾಮದ ವಿವಾದಿತ ಜಮೀನಿಗೆ ತೆರಳಿ ಆ ಜಮೀನಿನ ಮರವೊಂದರ ಕೆಳಗೆ ಬರಿ ನೆಲ್ಲದಲ್ಲೇ ಕುಳಿತು ಗ್ರಾಮಸ್ತರಿಂದ ವಾಸ್ತವ ಸ್ಥಿತಿಯ ಪರಾಮರ್ಶೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಸರ್ಕಾರಿ ಜಮೀನು ಬೇರೆ ರಾಜ್ಯದವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಬಗ್ಗೆ ದಾಖಲೆಗಳ ಸಮೇತ ವಿವರಿಸಿದರು. ಸದರಿ ಜಮೀನಿನಲ್ಲಿ ಪುರಾತನ ದೇವಸ್ಥಾನ ಇದ್ದು ಅದನ್ನು ಬಳಸಲು ಸಹಾ ಆಗುತ್ತಿಲ್ಲ ಎಂದು ನೋವು ತೋಡಿಕೊಂಡರು.
ಮಹಿಳೆಯರು ಮಾತನಾಡಿ ಗ್ರಾಮದಲ್ಲಿ ಸುಮಾರು ಕುಟುಂಬಗಳಿಗೆ ಸ್ವಂತ ಮನೆ ನಿವೇಶನ ಇರುವುದಿಲ್ಲ ಸದರಿ ಸರ್ಕಾರಿ ಜಮೀನಿನಲ್ಲಿ ನಿವೇಶನ ವಿಂಗಡಿಸಿ ಪರಿಶಿಷ್ಟ ಜನಾಂಗದವರಿಗೆ ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಲು ಕೋರಿದರು.
ಶಾಸಕರು ಗ್ರಾಮಸ್ಥರ ಸಮಸ್ಯೆ ಆಲಿಸಿ ಗ್ರಾಮದ ಸರ್ಕಾರಿ ಜಮೀನನ್ನು ಯಾರೋ ಸಂಬಂಧವಿಲ್ಲದ ವ್ಯಕ್ತಿ ಅತಿಕ್ರಮಿಸಿಕೊಂಡಿದ್ದರೆ ಕಾನೂನು ರೀತಿ ಕ್ರಮ ಕೈಗೊಂಡು ಅವರನ್ನು ಹೊರ ಹಾಕಲಾಗುವುದು ಎಂದು ಭರವಸೆ ನೀಡಿದರು.
ಸದರಿ ಸರ್ಕಾರಿ ಜಮೀನನ್ನು ಅಳತೆ ಮಾಡಿಸಿ ಗಡಿ ಗರುತಿಸಲು ತಹಶಿಲ್ದಾರ್ ರವರಿಗೆ ಸೂಚಿಸಲಾಗುವುದು ಎಂದು ತಿಳಿಸಿದ ಅವರು, ನಂತರ ನಿಯಮಾನುಸಾರ ನಿವೇಶನಗಳನ್ನು ವಿಂಗಡಿಸಿ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಮೀನು ಮಂಜೂರಿಗಾಗಿ ಅರ್ಜಿ ಹಾಕಿಕೊಂಡಿರುವವರಿಗೆ ದರಖಾಸ್ತು ಸಮಿತಿ ಸಭೆಯಲ್ಲಿ ಕಡತ ಮಂಡಿಸಿ ಜಮೀನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಈಗ ಉದ್ಭವವಾಗಿರುವ ಸಮಸ್ಯೆ ಬಗೆಹರಿಸಲು ಪ್ರತಿ ಹಂತದಲ್ಲೂ ತಮ್ಮ ಜೊತೆ ನಿಲ್ಲುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪ್ರಮುಖ ಮುಖಂಡರು ಹಾಜರಿದ್ದರು.
ವೆಂಗಸಂದ್ರ-ರೈತರಸಮಸ್ಯೆಗೆ ಸ್ಪಂದನೆ
ಶಾಸಕಿ ರೂಪಕಲಾ ಎಂ ಶಶಿಧರ್ ಇದೇ ದಿನ ವೆಂಗಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರಿಂದ ಸಮಸ್ಯೆ ಆಲಿಸಿದರು. ಭೇಟಿ ಸಂದರ್ಬದಲ್ಲಿ ಬೆಂಗಳೂರು – ಚನೈ ಎಕ್ಸ್‍ಪ್ರೆಸ್ ರಸ್ತೆಗೆ ಭೂಸ್ವಾಧೀನವಾಗಿರುವ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಜೀವನಾಧಾರವಾಗಿದ್ದ ಜಮೀನು ಕಳೆದುಕೊಂಡಿದ್ದು ಪರಿಹಾರ ಮೊತ್ತ ತೀರ ಕಡಿಮೆ ನೀಡಿದ್ದು, ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾತನಾಡಲು ರೈತರು ಕೋರಿದರು. ಇನ್ನು ಹಲವರದು ಖಾತೆ ಬದಲಾವಣೆಯಾಗದೆ ಪರಿಹಾರ ಹಣ ಬಂದಿಲ್ಲ ಎಂಬುದನ್ನೂ ಗಮನಕ್ಕೆ ತಂದರು.
ಶಾಸಕರು ರೈತರ ಸಮಸ್ಯೆ ಆಲಿಸಿ ಭೂಸ್ವಾಧೀನವಾದ ಜಮೀನಿಗೆ ಪರಿಹಾರದ ಹಣ ಕಡಿಮೆ ಬಂದಿರುವ ರೈತರ ಸಂಪೂರ್ಣ ವಿವರಗಳೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ ಪರಿಹಾರ ಹಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಖಾತೆ ಬದಲಾವಣೆ ಆಗದೆ ಇರುವ ಪ್ರಕರಣಗಳನ್ನು ಕೂಡಲೆ ಬಗೆಹರಿಸಲು ತಹಶಿಲ್ದಾರ್ ರವರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದ ಅವರು, ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ವೆಂಗಸಂದ್ರ ಪಂಚಾಯಿತಿ ಅಧ್ಯಕ್ಷ ಶಂಕರ್, ಎ.ಪಿ.ಎಂ.ಸಿ. ಅಧ್ಯಕ್ಷ ವಿಜಯರಾಘವ ರೆಡ್ಡಿ, ಗ್ರಾ.ಪಂ ಸದಸ್ಯರಾದ ಅಪ್ಪಾಜಿ ಗೌಡ, ಮುರಳೀಕೃಷ್ಣ, ವೆಂಕಟರಾಮ್, ಮುಖಂಡರಾದ ರಾಜೇಂದ್ರ, ವೆಂಕಟಾಚಲಪತಿ, ಹೆಚ್.ಕೃಷ್ಣಪ್ಪ, ಚಂದ್ರಶೇಖರ್, ರವಿಕುಮಾರ್, ರಮೇಶ್, ವೆಂಕಟರಾಮಪ್ಪ,ಸುಧಾಕರ್, ಲಕ್ಷ್ಮೀಪತಿ, ಅಣ್ಣಯ್ಯ, ರೆಡ್ಡೆಪ್ಪ, ಕೃಷ್ಣಮೂರ್ತಿ, ಎಂ.ಡಿ. ನಾರಾಯಣ್, ಬಾಲಕೃಷ್ಣ, ಪದ್ಮನಾಭರೆಡ್ಡಿ, ಶ್ರೀನಿವಾಸರೆಡ್ಡಿ, ಶ್ರೀಧರ್ ರೆಡ್ಡಿ, ರಾಮಕೃಷ್ಣಪ್ಪ, ಮುನಿಸ್ವಾಮಿ ಮತ್ತಿತರ ಮುಖಂಡರು ಹಾಜರಿದ್ದರು.