ಕೋಲಾರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗವನ್ನು ಆಧುನಿಕ ಭಗವದ್ಗೀತೆ ಎಂದು ಕರೆಯುತ್ತಾರೆ. ಮಂಕುತಿಮ್ಮನ ಕಗ್ಗವನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಇಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಕೆಯುಡಬ್ಲ್ಯೂಜೆ ಸಂಸ್ಥಾಪಕರಾದ ಡಿ.ವಿ.ಜಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇರುವುದರಲ್ಲಿ ತೃಪ್ತಿ ಪಡುವುದು ನಿಜವಾದ ಜೀವನ ಎಂಬ ಸೂತ್ರವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಿ.ವಿ.ಜಿ ಅವರು ಬದಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಸಹ ಹಾಸ್ಯದಿಂದಲೇ ಮಾತನಾಡುತ್ತಿದ್ದರು. ಹಾಸ್ಯಕ್ಕೆ ಮತ್ತೊಂದು ಹೆಸರು ಡಿ.ವಿ.ಜಿ. ಅವರಿಗೆ ಬಂದ ಪ್ರಶಸ್ತಿ ಕಾಣಿಕೆಗಳನ್ನು ಬಳಸಿಕೊಳ್ಳದೆ ಗೋಖಲೆ ಸಂಸ್ಥೆಗೆ ಕೊಟ್ಟಿರುವುದು ಅವರ ಪ್ರಾಮಾಣಿಕತೆಗೆ ಮತ್ತೊಂದು ಮಕುಟಪ್ರಾಯ ಎಂದರು.
ಹೊಟ್ಟೆಪಾಡಿಗಾಗಿ ಬೇರೆ ವೃತ್ತಿ ನೋಡಿಕೊಳ್ಳಿ ಜನರ ಸೇವೆಗಾಗಿ ಮತ್ತು ಸಮಾಜ ಸೇವೆಗಾಗಿ ಮಾತ್ರ ರಾಜಕೀಯ ಮಾಡಿ ಎಂದು ಹೇಳಿದ್ದರು. ಆದರೆ ಇಂದಿನ ಪರಿಸ್ಥಿತಿಯ ಚಿತ್ರಣವೇ ಬೇರೆಯಾಗಿದೆ. ಅವರು ಮಾರ್ಗದರ್ಶನ ನೀಡದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಅವರ ಮಾರ್ಗದರ್ಶನ ಪ್ರಸ್ತುತ. ಡಿ.ವಿ.ಜಿ ಅವರ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲದಿದ್ದರೂ ಅವರನ್ನು ನೆನೆಯುವ ಕೆಲಸ ಮಾಡೋಣ. ಅವರ ಆದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಬದುಕಿನ ಎಷ್ಟೇ ಕಷ್ಟದಲ್ಲಿಯೂ ಹಣ ಮತ್ತು ಪ್ರಸಿದ್ಧಿಯ ವ್ಯಾಮೋಹದ ಹಿಂದೆ ಹೋಗದೆ ಸ್ವಾಭಿಮಾನದಿಂದ ಸಾಹಿತ್ಯ ರಚನೆ ಮಾಡಿದ ಡಿವಿಜಿಯವರು ಇಂದಿನ ಪೀಳಿಗೆಯ ಪತ್ರಕರ್ತರಿಗೆ ಆದರ್ಶವಾಗಬೇಕೆಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಡಿ.ವಿ.ಜಿ ಅವರ ಜೀವನ ಚರಿತ್ರೆಯನ್ನು ಮೆಲುಕು ಹಾಕಲು ಪ್ರತಿಯೊಬ್ಬ ವ್ಯಕ್ತಿಯೂ ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಹನೀಯರ ಪುಸ್ತಕಗಳನ್ನು ಓದಿದಾಗ ಮಾತ್ರ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಪತ್ರಕರ್ತರಿಗೆ ಪತ್ರಿಕಾ ಮೌಲ್ಯಗಳನ್ನು ತುಂಬುವ ಮೂಲಕ ಸಮಾಜದ ನೊಂದವರ ಧ್ವನಿಯಾಬೇಕೆಂದರು. ಇಂದು ಅದೇ ದಾರಿಯಲ್ಲಿ ಯುವ ಪತ್ರಕರ್ತರು ಮುನ್ನಡೆಯುವ ದಿಸೆಯಲ್ಲಿ ಡಿ.ವಿ.ಜಿ. ಅವರ ಜಯಂತಿಯನ್ನು ಪ್ರತಿಯೊಬ್ಬ ಪತ್ರಕರ್ತರು ಮಾಡುವ ಮೂಲಕ ಅವರಿಂದ ನಾವು ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ್ ಮಾತನಾಡಿ, ಇಂದು ಪತ್ರಿಕಾರಂಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬದನ್ನು ಮನಗಂಡು ಹಿರಿಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಿದಾಗ ಮಾತ್ರ ಪತ್ರಿಕಾರಂಗದ ಗೌರವ ಹೆಚ್ಚುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ ಸಮಾಜದ ಪ್ರತಿಯೊಬ್ಬರು ಡಿ.ವಿ.ಜಿ ಅವರ ಹಾದಿಯಲ್ಲಿ ಸಾಗಿ ಅವರಲ್ಲಿದ್ದ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಡಿ.ವಿ.ಜಿ ಅವರಿಗೆ ನೀಡುವ ನಿಜವಾದ ಗೌರವ ಎಂದರು.
ಡಿ.ವಿ.ಗುಂಡಪ್ಪ ಅವರನ್ನು ಆಧುನಿಕ ಸರ್ವಜ್ಞ ಎಂದರೆ ತಪ್ಪಾಗಲಾರದು. ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಬರೆದಿರುವ ಕೃತಿಗಳನ್ನು ಓದುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದರು.
ಕಾರ್ಯಕ್ರಮದಲ್ಲಿ ಮಾಮಿ, ಬಾಲನ್, ಎನ್.ಸತೀಶ್, ಈಶ್ವರ್, ರಮೇಶ್, ಎನ್.ಗಂಗಾಧರ್, ಕಿರಣ್, ಗೋಪಿ, ಮುಕ್ತಿಯಾರ್ ಅಹಮದ್, ಮದನ್, ರಾಘವೇಂದ್ರ ಪ್ರಸಾದ್, ಅಮರ್, ಎನ್.ಶಿವಕುಮಾರ್, ಪ್ರಕಾಶ್, ಶಿವು ಉಪಸ್ಥಿತರಿದ್ದರು.