ಉಡುಪಿ : ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ವೇದಿಕೆಯ ನೇತೃತ್ವದಲ್ಲಿ ಅಗಸ್ಟ್ 2ರಂದು ಉಡುಪಿಯಲ್ಲಿ ನಡೆಯುವ ಕಾಲ್ನಾಡಿಗೆ ಜಾತ ಹಾಗೂ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (ಇಫ್ಕಾ) ಇದರ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಲೂವೀಸ್ ಲೋಬೊ ಕಲ್ಮಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನಾ ಸಭೆ ಹಾಗೂ ಪ್ರತಿಭಟನಾ ಜಾತವು ಶೋಕಮಾತ ದೇವಾಲಯ ಉಡುಪಿ ಇಲ್ಲಿಂದ ಆರಂಭವಾಗಿ ಸರ್ವಿಸ್ ಬಸ್ ನಿಲ್ದಾಣ, ಕೆಎಂ ಮಾರ್ಗ, ಕೋರ್ಟ್ ರೋಡ್ ಮೂಲಕ ಸಾಗಿ ಮಿಷನ್ ಕಾಂಪೌಂಡ್ ನಲ್ಲಿ ಪ್ರತಿಭಟನಾ ಸಭೆಯ ಮೂಲಕ ಮುಕ್ತಾಯಗೊಳ್ಳಲಿದೆ. ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ 7,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಗಳಿಂದ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿದ್ದು ಅಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಂಡು ಮತ್ತೊಮ್ಮೆ ಅಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಬೋ ತಿಳಿಸಿದ್ದಾರೆ.