ಶ್ರೀನಿವಾಸಪುರ : ಕೋಲಾರ ಜಿಲ್ಲೆಯಾದ್ಯಾಂತ ಸರಿ ಸುಮಾರು 58 ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ಮಾವುನ್ನು ಬೆಳೆಯುತ್ತಿದ್ದು, ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ಸಹಜವಾಗಿ ಹೂವು ಬರುವುದು ಆದರೆ ಹವಾಮಾನ ವೈಪರೀತ್ಯಾದಿಂದಾಗಿ ಈ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹೂವು ಬಂದು ಅತಿ ಕಡಿಮೆ ಶೇಕಡಾ 30% ರಷ್ಟು ಫಸಲಿನ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಹೂವು ಬಂದಾಗಿನಿಂದ ಇಲ್ಲಿಯ ತನಕ ಮಳೆ ಬಾರದೆ ಬಿಸಿಲಿನ ತಾಪಮಾನ ಹೆಚ್ಚಾಗಿ ಅಲ್ಪ ಸ್ವಲ್ಪ ಬಂದಿರುವ ಮಾವಿನ ಕಾಯಿ ಮರಗಳಲ್ಲೇ ಒಣಗಿ ಬತ್ತಿಹೋಗುತ್ತಿದೆ ಎಂದು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಶನಿವಾರ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಮಾವು ಬೆಳೆಗಾರರಿಗೆ ಸರ್ಕಾರದವತಿಯಿಂದ ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲಾ ಮಾವು ಬೆಳೆಗಾರರು ಮಳೆಯನ್ನೇ ಅವಲಂಭಿಸಿರುತ್ತಾರೆ. ಹಾಗೂ ಶೇಕಡಾ 60% ರಷ್ಟು ರೈತರು ಮಾವು ಬೆಳೆಯನ್ನೇ ಅವಲಂಭಿಸಿ ಜೀವನವನ್ನು ಸಾಗಿಸುತ್ತಿದ್ದಾರೆ. ಈಗ ಜೀವನಾಡಿಯಾದ ಮಾವಿನ ಬೆಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರ ಜೊತೆಗೆ ರೈತರಿಂದ ಗುತ್ತಿಗೆ ಆಧಾರದ ಮೇಲೆ ವ್ಯಾಪಾರ ವಹಿವಾಟನ್ನು ನಡೆಸಿರುವಂತಹ ಸಣ್ಣ ವ್ಯಾಪಾರಸ್ಥರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಒದಗಿ ಬಂದಿದೆ. ಹಾಗೂ ಬಿಸಿಲಿನ ತಾಪಮಾನಕ್ಕೆ ಕಸಕಡ್ಡಿ ಒಣಗಿ ಹೋಗಿರುವುದರಿಂದ ಸಾವಿರಾರು ಎಕರೆ ತೋಟಗಳು ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಬಿದ್ದು ಕಮರಿ ಹೋಗಿವೆ.
ಆದ್ದರಿಂದ ಜಿಲ್ಲಾಡಳಿತ ಹಾಗೂ ಸರ್ಕಾರವು ಈ ಕೂಡಲೇ ಎಚ್ಚೆತ್ತುಕೊಂಡು ಅಧಿಕಾರಿಗಳ ತಂಡಗಳನ್ನು ರಚನೆ ಮಾಡಿ ಮಾವಿನ ತೋಟಗಳಿಗೆ ಬೇಟಿ ನೀಡಿ ಮಾವಿನ ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ಮಾಡಿ ಎಲ್ಲಾ ರೈತರಿಗೂ ಹಾಗೂ ಸಣ್ಣ ವ್ಯಾಪಾರಸ್ಥರಿಗೂ ಒಂದು ಎಕರೆಗೆ ಕನಿಷ್ಠ 50,000/- ರೂಗಳ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಹಾಗು ಜಿಲ್ಲಾಧಿಕಾರಿಗಳು ತಾಲೂಕಿಗೆ ಬೇಟಿ ಮಾವು ಬೆಳಗಾರರ ಸಂಕಷ್ಟವನ್ನು ಆಲಿಸಿ ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ಕೊಡಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರಾತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ರಾಜ್ಯದಲ್ಲಿ ಸರಿ ಸುಮಾರು 2ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದ್ದು , ಅದರಲ್ಲಿ ಶೇ 60 % ಮಾವನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿಯೂ ಶ್ರೀನಿವಾಸಪುರ ತಾಲೂಕು ಹೆಚ್ಚು ಮಾವು ಬೆಳೆಯುತ್ತಿದೆ. ಆದರೆ ಕಳೆದ ಮೂರುನಾಲ್ಕು ವರ್ಷಗಳಿಂದಲೂ ಸಹ ಮಾವು ಬೆಳೆಗಾರರು ಒಂದಲ್ಲ ಒಂದು ರೀತಿ ಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ. ಸರ್ಕಾರವು ಮಾವು ಬೆಳೆಗಾರರ ರಕ್ಷಣೆ ದಾವಿಸಿ, ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಂಚಾಲಕ ಬಿ.ಎ.ಸೈಯದ್ ಫಾರೂಕ್, ಜಿಲ್ಲಾ ಖಜಾಂಚಿ ಬೆಲ್ಲಂ ಶ್ರೀನಿವಾಸರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಎಂ.ಬೈರೆಡ್ಡಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಆರ್.ವೆಂಕಟೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ, ಸದಸ್ಯರಾದ ವಿಶ್ವನಾಥರೆಡ್ಡಿ, ದೇವರಾಜ್, ಎಂ.ಎಸ್.ನಾಗರಾಜ್, ಶ್ರೀನಿವಾಸರೆಡ್ಡಿ, ಕೃಷ್ಣಪ್ಪ, ಚಂಗಪ್ಪ, ಜಿ.ಮಂಜಳ, ಎಂ.ಜಯರಾಮರೆಡ್ಡಿ, ಟಿ.ಎಚ್.ಆಂಜಲಪ್ಪ, ಸಿ.ಎಂ.ರಾಧಕೃಷ್ಣ, ಟಿ.ಎನ್.ರಮೇಶ್ಬಾಬು ಹಾಜರಿದ್ದರು.