ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯಬೇಕು :ಡಾ. ಟಿ.ಬಿ.ಬಸವರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಟಿ.ಬಿ.ಬಸವರಾಜು ಹೇಳಿದರು.
ತಾಲ್ಲೂಕಿನ ಎಚ್.ಜಿ.ಹೊಸೂರು ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಗುರುವಾರ, ಗೇರು ಬೆಳೆಯಲ್ಲಿ ಅಧಿಕ ಇಳುವರಿಗಾಗಿ ವೈಜ್ಞಾನಿಕ ಉತ್ಪಾದನಾ ಕ್ರಮಗಳು ಎಂಬ ವಿಶಯ ಕುರಿತು ಏರ್ಪಡಿಸಿದ್ದ ಒಂದು ದಿನದ ರೈತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕ ಪೋಷಕಾಂಶ ಒಳಗೊಂಡಿರುವ ಪೋಷಕಾಂಶಗಳಿಂದ ಗೋಡಂಬಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಆದರೆ ದೇಶದ ಬೇಡಿಕೆಯ ಅರ್ಧದಷ್ಟು ಗೋಡಂಬಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದ ಗೋಡಂಬಿಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ 4000 ಗೋಡಂಬಿ ಸಂಸ್ಕರಣ ಘಟಕಗಳಿದ್ದು, ಸುಮಾರು 15 ಲಕ್ಷ ಜನ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಗೋಡಂಬಿ ಬೆಳೆಯುವ ವಿಸ್ತೀರ್ಣ ಹೆಚ್ಚಿಸುವ ದೃಷ್ಟಿಯಿಂದ, ರೈತರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ರೈತರು ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಗೀರು ಗಿಡ ನೆಟ್ಟು 3 ವರ್ಷ ಪೋಷಣೆ ಮಾಡಿದರೆ, ಮುಂದಿನ 35 ವರ್ಷ ಫಸಲು ಪಡೆಯಬಹುದು ಎಂದು ಹೇಳಿದರು.
ಗೋಡಂಬಿ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಕುರಿತು ಸಂಪನ್ಮೂಲ ವ್ಯಕ್ತಿ ಬಿ.ಎನ್.ರಾಜೇಂದ್ರ, ಗೋಡಂಬಿ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಕುರಿತು ಡಾ. ಬಿ.ಆಂಜನೇಯರೆಡ್ಡಿ, ಗೊಡಂಬಿ ಬೆಳೆಯ ಕೊಯ್ಲೋತ್ತರ ತಂತ್ರಜ್ಞಾನ ಕುರಿತು ಎಂ.ರಮೇಶ್, ಗೋಡಂಬಿ ಬೆಳೆ ಸಂರಕ್ಷಣೆ ಮತ್ತು ಮಾರುಕಟ್ಟೆ ಬಗ್ಗೆ ಬಿ.ಸುಬ್ರಮಣ್ಯಂ , ಗೋಡಂಬಿ ಬೆಳೆಯಲ್ಲಿ ಸಸ್ಯಾಭಿವೃದ್ಧಿ ವಿಧಾನಗಳು, ಸಂಕರಣ ತಳಿಗಳ ಪರಿಚಯ ಮತ್ತು ಮೈದಾನ ಪ್ರದೇಶಕ್ಕೆ ಸೂಕ್ತವಾದ ತಳಿಗಳು ಎಂಬ ವಿಷಯದ ಬಗ್ಗೆ ಡಾ. ಕೆ.ಆರ್.ರಾಮಚಂದ್ರ ಮಾಡತನಾಡಿದರು.
ಈ ಸಂದರ್ಭದಲ್ಲಿ ರೈತರಿಗೆ ಗೋಡಂಬಿ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ವಿವಿಧ ಗೋಡಂಬಿ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಗತಿಪರ ರೈತರಾದ ಮಂಜುನಾಥ್, ಸೋಮಶೇಖರ್ ಇದ್ದರು
.