ವಾರಾಣಾಸಿ: ಮಂಗಳಮುಖಿಯರ ಹಕ್ಕುಗಳ ಬಗ್ಗೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಗಮನ ಸೆಳೆಯುವ ಪ್ರಯತ್ನವಾಗಿ, ನಿರ್ಮೋಹಿ ಅಖಾಡದ ಮಂಗಳಮುಖಿ ಮಹಾಮಂಡಲೇಶ್ವರ ಹೇಮಂಗಿ ಸಖಿ ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಟಿಕೆಟ್ ನಲ್ಲಿ ಕಣಕ್ಕೆ ಇಳಿದಿದ್ದಾರೆ.“ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೊ ಅಭಿಯಾನ ಆರಂಭಿಸಿರುವುದು ಒಳ್ಳೆಯದು. ಆದರೆ ಮಾಂಸ ಮಾರಾಟ ದಂಧೆ ಅಥವಾ ಭಿಕ್ಷಾಟನೆಯಲ್ಲಿ ತೊಡಗಿರುವ ಕಿನ್ನಾರ್ ಗಳ ಬಗ್ಗೆ ಅಭಿಯಾನ ನಡೆಸುವುದನ್ನು ಯಾರೂ ಯೋಚಿಸಿಲ್ಲ” ಎಂದು ಹೇಮಂಗಿ ಹೇಳಿದ್ದಾರೆ.
ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಕನಿಷ್ಠ ಒಂದು ಕ್ಷೇತ್ರವನ್ನು ಮಂಗಳಮುಖಿಯರಿಗೆ ಮೀಸಲಿಡಬೇಕು. ಆ ಮೂಲಕ ಅವರ ಧ್ವನಿ, ಸಮಸ್ಯೆಗಳು, ತಳಮಳಗಳು ಸೂಕ್ತ ವೇದಿಕೆಯನ್ನು ತಲುಪುವುದನ್ನು ಖಾತರಿಪಡಿಸಬೇಕು ಎಂದು ಹೇಮಂಗಿ ಒತ್ತಾಯಿಸಿದರು.
“ನಾನು ಮೋದಿಯವರನ್ನು ಗೌರವಿಸುತ್ತೇನೆ. ಅವರ ಕಾರ್ಯಗಳನ್ನು ಶ್ಲಾಘಿಸುತ್ತೇನೆ. ಆದರೆ ಮಂಗಳಮುಖಿಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಹಾಗೂ ರಾಜಕೀಯ ಪಕ್ಷಗಳ ಗಮನ ಸೆಳೆಯುವುದನ್ನು ಖಾತರಿಪಡಿಸುವ ಉದ್ದೇಶದಿಂದ ಅವರ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಗುಜರಾತ್ ವ ಬರೋಡಾದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದ 47 ವರ್ಷ ವಯಸ್ಸಿನ ಹೇಮಂಗಿ, ತಂದೆ-ತಾಯಿ ಮೃತಪಟ್ಟ ಬಳಿಕ ಮತ್ತು ಸಹೋದರಿಯ ವಿವಾಹ ಪೂರೈಸಿದ ಬಳಿಕ ಶ್ರೀಕೃಷ್ಣನ ಭಕ್ತಿಗಾಗಿ ವೃಂದಾವನಕ್ಕೆ ಆಗಮಿಸಿದರು. ಕ್ಷಿಪ್ರ ಅವಧಿಯಲ್ಲೇವಿಶ್ವದ ಮೊದಲ ಮಂಗಳಮುಖಿ ಕಥಾವಾಚಕರಾಗಿ ಜನಪ್ರಿಯತೆ ಪಡೆದರು. 2019ರ ಕುಂಭಮೇಳದ ಸಂದರ್ಭದಲ್ಲಿ ಅವರು ಪ್ರಯಾಗ್ರಾಜ್ ನಲ್ಲಿ ಆಚಾರ್ಯ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದರು.
ಅಖಿಲ ಭಾರತೀಯ ಸಾಧು ಸಮಾಜ 2019ರ ಫೆಬ್ರುವರಿ 4ರಂದು ಅವರಿಗೆ ಭಗವದ್ಭೂಷಣ ಮಹಾಮಂಡಲೇಶ್ವರ ಎಂಬ ಬಿರುದು ನೀಡಿದೆ. ಪಶುಪತಿ ಅಖಾಡಾದ ಜಗದ್ಗುರು ಪೀಠಾಧೀಶ್ವರ ಗೌರಿಶಂಕರ ಮಹಾರಾಜ್ ಇವರಿಗೆ ಪಟ್ಟಾಭಿಷೇಕ ನೆರವೇರಿಸಿದ್ದರು. ಹೇಮಂಗಿ ಸಖಿ ಮೊಟ್ಟಮೊದಲ ಮಂಗಳಮುಖಿ ಮಹಾಮಂಡಲೇಶ್ವರ ಎನಿಸಿಕೊಂಡಿದ್ದರು. ಬಳಿಕ ನಿರ್ಮೋಹಿ ಅಖಾಡಾ ಜತೆ ಗುರುತಿಸಿಕೊಂಡಿದ್ದ ಇವರು, 2022ರಲ್ಲಿ ಜ್ಞಾನವಾಪಿಯಲ್ಲಿ ಜಲಾಭಿಷೇಕಕ್ಕೆ ಕರೆ ನೀಡಿದ ಬಳಿಕ ಪ್ರಖ್ಯಾತಿಗೆ ಬಂದಿದ್ದರು.