ಹೋಮ್ ಐಸೋಲೇಷನ್ ನಿಯಮ ಉಲ್ಲಂಘಿಸಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ – ಅರವಿಂದ ಲಿಂಬಾವಳಿ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ : ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ನಿಯಮ ಉಲ್ಲಂಘಿಸಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಅವರಿಗೆ ಚಿಕಿತ್ಸೆಯನ್ನು ನೀಡುವಂತೆ ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಸೂಚಿಸಿದರು .
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ ಗುಣಮುಖರಾದವರ ಸಂಖ್ಯೆ , ಹೋಂ ಐಸೋಲೇಷನ್‌ನಲ್ಲಿ ಇರುವವರು , ಆಸ್ಪತ್ರೆಯಲ್ಲಿ ದಾಖಲಾಗಿರುವವರು , ಒಟ್ಟು ಬೆಡ್‌ಗಳ ಲಭ್ಯವಿರುವ ಸಂಖ್ಯೆ , ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಸೇರಿದಂತೆ ಲಸಿಕೆ ನೀಡಿರುವ ಅಂಕಿ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರ ಕುಟುಂಬದವರು ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಾಗಿದ್ದು ಅವರು ಸಹಾ ಕ್ವಾರನ್‌ಟೈನ್‌ನಲ್ಲಿ ಇರಬೇಕು. ಕುಟುಂಬದ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಬೇಕು ಅಗತ್ಯ ವಸ್ತುಗಳ ಪೂರೈಕೆಗಾಗಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಯಾವುದೇ ಹೋಂ ಐಸೋಲೇಷನ್‌ ಸೋಂಕಿತ ವ್ಯಕ್ತಿಯ ಮನೆಯಲ್ಲಿ ಒಂದೇ ಶೌಚಾಲಯ ಇದ್ದಲ್ಲಿ ಅಂತಹವರನ್ನು ಹೋಂ ಐಸೋಲೇಷನ್‌ನಲ್ಲಿ ಇಟ್ಟಲ್ಲಿ ಕುಟುಂಬದವರಿಗೂ ಸೋಂಕು ಹರಡುವುದರಿಂದ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಯಿಸಿ ಚಿಕಿತ್ಸೆ ನೀಡಬೇಕು ಎಂದು ಸಚಿವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ನಿರಾಕರಿಸುತ್ತಿರುವುದರ ಬಗ್ಗೆ ದೂರುಗಳು ಬಂದಿರುವುದನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಂತಹ ಸಂದರ್ಭಗಳಲ್ಲಿ ಸೋಂಕು ಹರಡುವುದನ್ನು ತಡೆಯುವ ದೃಷ್ಟಿಯಿಂದ ಪೋಲೀಸ್ ಸಿಬ್ಬಂದಿಯ ಸಹಾಯದೊಂದಿಗೆ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಡಾ || ಆರ್. ಸೆಲ್ವಮಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ವಿಧಿಸಿದ್ದರಿಂದ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಈ ಸಂದರ್ಭದಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಹಾಗೂ ಸ್ಥಳೀಯ ವರ್ತಕರ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಲಾಕ್‌ಡೌನ್ ವಿಸ್ತರಣೆ ಸಂದರ್ಭದಲ್ಲಿಯು ಸಹ ಜನರು ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವುದನ್ನು ತಪ್ಪಿಸಲು ಇದೆ ರೀತಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದ್ದು , 1404 ಬೆಡ್‌ಗಳು ಲಭ್ಯವಿದ್ದು , ಪ್ರಸ್ತುತ 477 ಬೆಡ್‌ಗಳು ಸೋಂಕಿತರ ಚಿಕಿತ್ಸೆಗೆ ಭರ್ತಿಯಾಗಿದೆ . ಅಂಜಿಕೆ , ಆತಂಕಗಳನ್ನು ತೊರೆದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಕೋರಿದರು .
ಜಿಲ್ಲೆಯಲ್ಲಿ ಸುಮಾರು 826 ಗ್ರಾಮಗಳಲ್ಲಿ ಕೋವಿಡ್‌ನ ಒಂದು ಪ್ರಕರಣ ಇಲ್ಲದಿರುವುದು ಸಂತೋಷದ ಸಂಗತಿ ಎಂದ ಅವರು , ಒಟ್ಟು ಸೋಂಕಿತರ ಪ್ರಕರಣಗಳಲ್ಲಿ ಶೇ . 50 ರಷ್ಟು ನಗರಗಳಲ್ಲಿ ಕಂಡುಬರುತ್ತಿದ್ದು , ಆತಂಕ ಮೂಡಿಸುವ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು. ಎಲ್ಲಾ ನಗರಸಭೆ ಮುಖ್ಯಸ್ಥರಿಗೆ ಕೋವಿಡ್ ಸಂಖ್ಯೆ ಕಡಿಮೆಗೊಳಿಸಲು ಅಗತ್ಯ ಕ್ರಮವಹಿಸಲು ಈ ಕೂಡಲೇ ಕಾರ್ಯೋನ್ಮುಖರಾಗುವಂತೆ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ಜಗದೀಶ್ ಅವರು ಮಾತನಾಡಿ , ಜಿಲ್ಲೆಯಲ್ಲಿ ಒಟ್ಟು 34,545 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು , ಒಟ್ಟು 26,524 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಹೊಸದಾಗಿ 580 ಪ್ರಕರಣಗಳು ಕಂಡು ಬಂದಿದೆ . ಇಂದು ಒಟ್ಟು 779 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಕರಣಗಳ ಶೇಕಡವಾರು 30.72 ರಷ್ಟು ಇದೆ . ಹೋಂ ಐಸೋಲೇಷನ್‌ನಲ್ಲಿ ಒಟ್ಟು 6,462 ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ವೈದ್ಯರ ನಡಿಗೆ ಹಳ್ಳಿಗಳ ಕಡೆ ಎಂಬ ಅಭಿಯಾನದೊಂದಿಗೆ ಪ್ರತಿ ಮನೆ ಮನೆಗೂ ಭೇಟಿ ಕೊಟ್ಟು ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್ . ಎಂ . ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ ಪೋಲೀಸ್ ಡಾ || ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ , ಉಪವಿಭಾಗಾಧಿಕಾರಿ ಸೋಮಶೇಖರ್ , ತಹಶೀಲ್ದಾರ್ ಶೋಭಿತಾ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ | ರವಿಕುಮಾರ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ || ಚಾರಿಣಿ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ