ಶ್ರೀನಿವಾಸಪುರ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾನುವಾರ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವನಾಗ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ನಾಗ ದೇವತೆ ದರ್ಶನ ಪಡೆದರು.
ಗ್ರಾಮದ ಹಿರಿಯ ಬಚ್ಚಿರೆಡ್ಡಿ ಮಾತನಾಡಿ, ಗ್ರಾಮದ ಪುರಾತನ ಚೌಡೇಶ್ವರಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗೆಯೇ ನವನಾಗ ದೇವತೆ ದೇವಾಲಯವೂ ನಾಗರಿಕರ ಗಮನ ಸೆಳೆದಿದೆ. ಹೆಚ್ಚಿನ ಸಂಖ್ಯೆಯ ಜನರು ಬಂದು ದರ್ಶನ ಪಡೆದು ಹೋಗುತ್ತಾರೆ. ಗ್ರಾಮ ಒಂದು ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ. ಗ್ರಾಮದ ದೇವಾಲಯಗಳಲ್ಲಿ ಲೋಕಕಲ್ಯಾಣಾರ್ಥ ನಿಗದಿತ ಸಮಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ರಮೇಶ್ ಬಾಬು, ನಾರಾಯಣಸ್ವಾಮಿ, ಹರೀಶ್, ಲಕ್ಷ್ಮೀನಾರಾಯಣ್, ಕಿಶೋರ್ ಬಾಬು, ವಿಜಯ್ ಕುಮಾರ್, ರಾಜೇಶ್, ಹರೀಶ್ ಇದ್ದರು.