ಟೇಕಲ್ ಜ 8 : ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರಿಗೆ ಸೋಮವಾರ ಅವರ ಮನೆ, ಜೆಲ್ಲಿ ಕ್ರಷರ್ ಹಾಗೂ ಆಪ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅವರ ಸ್ವಗ್ರಾಮ ಟೇಕಲ್ನ ಕೊಮ್ಮನಹಳ್ಳಿಯ ಮನೆಗೆ ಮುಂಜಾನೆ 5-30 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರು ಕಣ್ಣು ಬಿಡುವ ಹೊತ್ತಿಗೆ ಇಡಿ ಅಧಿಕಾರಿಯು ಮನೆಯೊಳಗೆ ಪ್ರವೇಶಿಸಿ ಅವರ ಬಳಿ ಎಲ್ಲಾ ಮಾಹಿತಿಯನ್ನು ಪಡೆದಿದ್ದಾರೆ. ಕೆಲವು ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಪತ್ನಿ ರತ್ನಮ್ಮನಂಜೇಗೌಡರು ಕುಟುಂಬದ ಇತರೆ ಸದಸ್ಯರನ್ನು ವಿಚಾರಣೆ ನಡೆಸಲಾಗಿದೆ. ಮನೆಯ ಪ್ರತಿ ರೂಮ್ನಲ್ಲಿ ಇಡಿ ಅಧಿಕಾರಿಗಳು ಇಂಚು ಇಂಚು ಶೋಧ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಕಾರ್ಯದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದು.
ಕ್ರಷರ್ ಪರಿಶೀಲನೆ : ನಂತರ ಶಾಸಕರ ಮಗ ಕೆ.ಎನ್.ಹರೀಶ್ರವರ ಒಡೆತನದ ಶ್ರೀ ನಂಜುಂಡೇಶ್ವರ ಸ್ಟೋನ್ ಕ್ರಷರ್ ಬಳಿ ಸುಮಾರು ಆರು ಮಂದಿ ಅಧಿಕಾರಿಗಳು ತೆರಳಿ ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಹರೀಶ್ನನ್ನು ಮನೆಯಿಂದ ಕ್ರಷರ್ಗೆ ಕರೆತಂದು ನಂತರ ಕ್ರಷರ್ಗೆ ಕರೆದೊಯ್ದು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಆಪ್ತ ಕಾರ್ಯದರ್ಶಿ ಮನೆ ಮೇಲೆ ದಾಳಿ : ಟೇಕಲ್ ಸಮೀಪದ ದೊಡ್ಡಮಲ್ಲೆ ಗ್ರಾಮದ ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್ ಮನೆ ಮೇಲೆ ದಾಳಿ ಮಾಡಿ ಅಲ್ಲಿಯು ಆತನ ಬಳಿ ಬಹುತೇಕ ಮಾಹಿತಿ, ವಿಚಾರಣೆ ನಡೆಸಿ ಆತನನ್ನು ಶಾಸಕರ ಮನೆಗೆ ಬಂದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಇನ್ನೂ ಆಪ್ತ ಕಾರ್ಯದರ್ಶಿ ಗುರುವಗೊಲ್ಲಹಳ್ಳಿ ಮಂಜುನಾಥನನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಶಾಸಕರ ಮನೆಯ ಮುಂದಿನ ಅವರ ಎಲ್ಲಾ ಕಾರುಗಳನ್ನು, ಮನೆಯ ಎಲ್ಲಾ ಕೊಠಡಿಗಳನ್ನು ಇಡಿ ಅಧಿಕಾರಿಗಳ ತಂಡವು ತಪಾಸಣೆ ನಡೆಸಿತು. ಮುಂಜಾನೆ ಒಂದೇ ಕಾಲದಲ್ಲಿ ತಾಲ್ಲೂಕಿನಲ್ಲಿ ಸುಮಾರು 8ಕ್ಕೂ ಹೆಚ್ಚು ಕಡೆ 40 ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ.
ಈ ಮಧ್ಯೆ ಶಾಸಕರ ಮನೆಯ ಮುಂದೆ ಮುಂಜಾನೆಯಿಂದಲೇ ಅವರ ಬೆಂಬಲಿಗರು ಜಮಾವಣೆಯಾಗಿದ್ದರಿಂದ ಅಲ್ಲಿ ಪೋಲಿಸ್ ಬಂದೋಬಸ್ತ್ ನೀಡಲಾಗಿತ್ತು. ಇನ್ನೂ ಶಾಸಕರ ಮನೆಗೆ ಮಿಲಿಟರಿ ಭದ್ರತೆಯನ್ನು ಒದಗಿಸಲಾಗಿತ್ತು. ಯಾವುದೇ ಕಾರಣಕ್ಕೂ ಸ್ಥಳೀಯ ಪೋಲಿಸ್ ಅಧಿಕಾರಿಗಳನ್ನು ಯಾರನ್ನು ಮನೆಯೊಳಗೆ ಪ್ರವೇಶಿಸಂತೆ ಇಡಿ ಅಧಿಕಾರಿಗಳು ನಿಗಾವಹಿಸಿದ್ದರು.
ಮುಖಂಡ ಹಾಗೂ ಶಾಸಕರ ಕಛೇರಿ ತಪಾಸಣೆ : ಮಾಲೂರು ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿರುವ ಶಾಸಕರ ಕಾರ್ಯಾಲಯವನ್ನು ಹಾಗೂ ಅಲ್ಲಿನ ಶಿಬಿರ ಕಛೇರಿಯನ್ನು ನಂತರ ಮುಖಂಡ ಅಬ್ಬೇನಹಳ್ಳಿ ಗೋಪಾಲ್ರವರ ಮನೆಯಲ್ಲೂ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇತ್ತೀಚೆಗಷ್ಟೆ ಕೋಲಾರದ ಕೋಚಿಮುಲ್ನಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಸದ್ದು ಮಾಡಿತ್ತು. ಹಾಗೂ ಕೋಲಾರ ಜಿಲ್ಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು 2ನೇ ಬಾರಿಗೆ ಶಾಸಕರಾದ ಮೇಲೆ ತಮ್ಮ ವ್ಯಕ್ತಿತ್ವ ಮತ್ತು ಸ್ಥಾನವು ಹೆಚ್ಚಾಗಿತ್ತು. ಇದನ್ನು ಸಹಿಸದ ವಿರೋಧ ಪಕ್ಷಗಳು ಇವರ ಮೇಲೆ ಇಡಿ ದಾಳಿ ಮಾಡಿಸಿದ್ದಾರೆಂದು ಕೆಲವು ಕಾಂಗ್ರೇಸ್ ಮುಖಂಡರುಗಳು ಆರೋಪ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಆತಂಕ : ಕಳೆದ 2 ಬಾರಿಯಿಂದ ಮಾಲೂರು ತಾಲ್ಲೂಕಿನಲ್ಲಿ ಶಾಸಕರಾಗಿ ಕೆ.ವೈ.ನಂಜೇಗೌಡರು ಆಯ್ಕೆಯಾಗಿದ್ದು ಕಾಂಗ್ರೇಸ್ ಹೈಕಮಾಂಡ್ನಲ್ಲು ಇವರಿಗೆ ಹೆಚ್ಚು ಗೌರವವಿದ್ದು ತಾಲ್ಲೂಕಿನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರು. ಸೋಮವಾರ ಮುಂಜಾನೆ ಇಡಿ ದಾಳಿ ತಿಳಿದ ತಕ್ಷಣ ತಾಲ್ಲೂಕಿನ ಬಹುತೇಕ ಜನರಲ್ಲಿ ಆತಂಕ ಮನೆ ಮಾಡಿತ್ತು ಅದರಲ್ಲೂ ಕಾಂಗ್ರೇಸ್ ಪಾಳಯದಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಶಾಸಕರ ಸ್ವಗ್ರಾಮ ಕೊಮ್ಮನಹಳ್ಳಿಗೆ ಅವರ ಅಭಿಮಾನಿಗಳ ದಂಡೆ ಇಡೀ ದಿನ ಅವರ ಮನೆ ಮುಂದೆ ಅವರಿಗಾಗಿ ಕಾದು ಕುಳಿತಿತ್ತು.