

ಕೋಲಾರ:- ಸಂಸ್ಕಾರ ಕಲಿಸುವುದು ಶಿಕ್ಷರಷ್ಟೇ ಪೋಷಕರದ್ದು ಜವಾಬ್ದಾರಿಯಾಗಿದೆ, ಗುಣಾತ್ಮಕ ಶಿಕ್ಷಣ ಸಿಗುವ ಸರ್ಕಾರಿ ಶಾಲೆಗಳ ಬಗ್ಗೆ ಕೀಳಿರಿಮೆ ತೊರೆದು ಮಕ್ಕಳನ್ನು ದಾಖಲಿಸಿ ನಮ್ಮೂರ ಶಾಲೆ ಅಭಿವೃದ್ದಿಗೆ ಗ್ರಾಮದ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಶಾಸಕ ಸಮೃದ್ದಿ ಮಂಜುನಾಥ್ ಕರೆ ನೀಡಿದರು.
ಜಿಲ್ಲೆಯ ಮಲ್ಲನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದ ಅವರು, ಸಾಧಕ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳೆಂಬ ಕೀಳಿರಿಮೆ ತೋರದಿರಿ, ಗುಣಾತ್ಮಕ ಶಿಕ್ಷಣ ಹಾಗೂ ಸಂಸ್ಕಾರ ಕಲಿಸುವ ಸಾಧಕ ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಿದ್ದು, ಪೋಷಕರು ಮಕ್ಕಳನ್ನು ಯಾವುದೇ ಅನುಮಾನವಿಲ್ಲದೇ ದಾಖಲಿಸಬಹುದು ಎಂದರು.
ಪ್ರತಿ ಮಗುವಿನ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ವಿಷಯ ಆಯ್ಕೆಗೆ ಅವಕಾಶ ಸಿಗಬೇಕು ಎಂದ ಅವರು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಸಮುದಾಯದ ಸಹಕಾರ ಅಗತ್ಯವಿದೆ ಎಂದು ತಿಳಿಸಿ, ಶಾಲೆಯ ಅಭಿವೃದ್ದಿಗೆ ಅಗತ್ಯವಾದ ಎಲ್ಲಾ ನೆರವು ಒದಗಿಸುವ ಭರವಸೆ ನೀಡಿ, ಮುಖ್ಯಶಿಕ್ಷಕ ಮುನಿರಾಮಯ್ಯ ಅವರು ಶಾಲೆಯ ಅಭಿವೃದ್ದಿಗೆ ಕೈಗೊಂಡಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ದುಶ್ಚಟಗಳಿಗೆ ಬಲಿಯಾಗದಿರಿ
ಮುಳಬಾಗಿಲು ತಹಸೀಲ್ದಾರ್ ಗೀತಾ ಮಾತನಾಡಿ, ಮಕ್ಕಳು ಕಲಿಕೆ ಸಂದರ್ಭದಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜೆಗಳಾಗಿ ದೇಶ,ಸಮಾಜಕ್ಕೆ ಕೊಡುಗೆ ನೀಡುವ ಮಹಾನ್ ಸಾಧಕರಾಗಿ ಹೊರಹೊಮ್ಮುವ ಮೂಲಕ ಶಾಲೆ,ಗ್ರಾಮ, ಪೋಷಕರಿಗೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ಟಿವಿ,ಮೊಬೈಲ್ ಗೀಳಿಗೆ ಒಳಗಾಗದಿರಿ, ಪೋಷಕರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ನಂತರ ಶಾಲೆಯಲ್ಲಿ ಅದು ಮುಂದುವರೆಯಬೇಕು ಎಂದ ಅವರು, ವಿದ್ಯೆಗಿಂತ ವ್ಯಕ್ತಿತ್ವ ನಿರ್ಮಾಣ ಅಗತ್ಯವೆಂದರು.
ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ರಾಮಚಂದ್ರ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದ್ದು, ನಿಮ್ಮ ಗುರಿ ಶೈಕ್ಷಣಿಕ ಸಾಧನೆಯಾಗಿರಲಿ ಎಂದು ಸಲಹೆ ನೀಡಿದರು.
ಪಠ್ಯದಷ್ಟೇ ಪಠ್ಯೇತರ ಪ್ರತಿಭೆ, ಕೌಶಲ್ಯ ಅಭಿವೃದ್ದಿಗೂ ಆದ್ಯತೆ ನೀಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಪ್ರೌಢಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯ,ಶಿಕ್ಷಣ ನೀಡಲಾಗುತ್ತಿದೆ, ಈ ಸುತ್ತಮುತ್ತಲ ಗ್ರಾಮಗಳ ಮಕ್ಕಳು ಇದರ ಸದುಪಯೋಗ ಪಡೆಯಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಬಿ.ಎಂ.ಮುನಿರಾಮಯ್ಯ ಮಾತನಾಡಿ, ಗ್ರಾಮೀಣ ಶಾಲೆ ಎಂಬ ಕೀಳಿರಿಮೆ ತೊರೆದು ಸಾಧನೆಗಾಗಿ ಮುನ್ನುಗ್ಗಿ ಎಂದು ಸಲಹೆ ನೀಡಿ, ಅಬ್ದುಲ್ ಕಲಾಂ ಅವರ ಆಶಯದಂತೆ ಕನಸು ಕಾಣಿ, ಯೋಚಿಸಿ, ಕೆಲಸ ಮಾಡಿ ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿ, ನಮ್ಮ ಪ್ರೌಢಶಾಲೆಯಲ್ಲಿ ಟೀಂ ವರ್ಕ್ನಿಂದಾಗಿ ಇಂದು ಸುಸಜ್ಜಿತ ಎಲ್ಲಾ ಸೌಲಭ್ಯಗಳು ಇಲ್ಲಿವೆ ಎಲ್ಲಾ ಶಿಕ್ಷಕರ ಸಹಕಾರಿದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ನಾವು ಸಾಧನೆ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪೂರ್ಣಕುಂಭದೊಂದಿಗೆ ಹೆಣ್ಣು ಮಕ್ಕಳು ಸೀರೆಯುಟ್ಟು ಸಂಭ್ರಮದಿಂದ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ನಡೆದ ನೃತ್ಯ ಪ್ರದರ್ಶನಗಳನ್ನೊಳಗೊಂಡ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿದ್ದು, ಮನಮೋಹಕವಾಗಿತ್ತು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಿಳಿಗೆ ಹಬ್ಬದೂಟ ಬಡಿಸಲಾಯಿತು. ಹಾಗೂ ಶಾಲೆಯ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಐದು ಚಿನ್ನದ ಪದಕ ಪಡೆದ ಚಂದನಾ,ಪತ್ರಕರ್ತರಾದ ಅಪ್ಪಾಜಿಗೌಡ,ನಾಗರಾಜ್,ತ್ಯಾಗರಾಜ್,ರಾಜ್ಯ ಶಾಲಾ ಶಿಕ್ಷಣ ಬೋಧಕ,ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಉಪಾಧ್ಯಕ್ಷೆ ಬಿ.ಎ.ಕವಿತಾ,ಕಾರ್ಯಾಆಧ್ಯಕ್ಷ ಗಿರೀಶ್ ಕುಮಾರ್, ಮಂಜುಳಾ, ಪುಷ್ಪಾ,ನೌಕರರ ಸಂಘದ ಖಜಾಂಚಿ ವಿ.ಮುರಳಿಮೋಹನ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷಮುರಳೀಧರ್, ತಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ,ಜೆಡಿಎಸ್ ಕಾರ್ಯದರ್ಶಿ ರಘುಪತಿರೆಡ್ಡಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗನ್ನಾಥ್,ಶಿಕ್ಷಕ ಸಂಘದಮುಖಂಡರಾದ ವೆಂಕಟಗಿರಿಯಪ್ಪ,ಓಬಳರೆಡ್ಡಿ, ವೈದ್ಯಾಧಿಕಾರಿ ಡಾ.ಸುನಿತಾ, ಪ್ರಾಂಶುಪಾಲ ನಾರಾಯಣಸ್ವಾಮಿ, ಗ್ರಾ.ಪಂ ಅಧ್ಯಕ್ಷೆ ಪುಷ್ಪಾ, ಪಿಡಿಒ ರಮೇಶ್,ಎಸ್ಡಿಎಂಸಿ ಸದಸ್ಯ ಅನಂತಪದ್ಮನಾಭಯ್ಯ, ರಮೇಶ್ ಮತ್ತಿತರರನ್ನು ಸನ್ಮಾನಿಸಲಾಯಿತು.