ಸಂವಿಧಾನದಡಿ ನಿಮಗೆ ಸಿಕ್ಕ ಅಧಿಕಾರ ಜವಾಬ್ದಾರಿ ಪುರುಷರಿಗೆ ವಹಿಸದಿರಿ ಮಹಿಳಾ ಮೀಸಲಾತಿ ಸದ್ಬಳಕೆ ಮಾಡಿಕೊಳ್ಳಿ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಮೀಸಲಾತಿಗಾಗಿ ಹೋರಾಟ ನಡೆಸುವ ಮಹಿಳೆಯರು ಸಿಕ್ಕ ಅಧಿಕಾರದ ಜವಾಬ್ದಾರಿಯನ್ನು ಪುರುಷರಿಗೆ ವಹಿಸದೇ ಸವಾಲಾಗಿ ಸ್ವೀಕರಿಸಿ ಆಡಳಿತ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಹರಿಸಿನ,ಕುಂಕುಮ,ಹೂವಿನೊಂದಿಗೆ `ಕಿಸಾನ್ ಶ್ರೀಲಕ್ಷ್ಮೀ’ ಠೇವಣಿ ಬಾಂಡ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಗ್ರಾಪಂ, ತಾಪಂ,ಜಿಪಂಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದೆ, ಜತೆಗೆ ವಿಧಾನಸಭೆ,ಲೋಕಸಭೆಯಲ್ಲೂ ಶೇ.33 ಮೀಸಲಾತಿಗೆ ಒತ್ತಾಯ ಕೇಳಿ ಬರುತ್ತಿದೆ ಇಂತಹ ಸಂದರ್ಭದಲ್ಲಿ ಹಲವು ಮಹಿಳೆಯರು ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಇಡೀ ಸಮಾಜವೇ ಒಪ್ಪುವಂತಹ ಜನಪರ ಆಡಳಿತ ನೀಡಿರುವ ಉದಾಹರಣೆಗಳೂ ಇವೆ ಎಂದರು.
ಸಂವಿಧಾನದಡಿ ಪುರುಷರಷ್ಟೇ ಮಹಿಳೆಯರಿಗೂ ಪ್ರತಿ ಕ್ಷೇತ್ರದಲ್ಲೂ ಸ್ಥಾನಮಾನ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪುರುಷರಷ್ಟೇ ಮಹಿಳೆಯರು ಇರುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಪುರುಷರಿಗೆ ಅಧಿಕಾರದ ಜವಾಬ್ದಾರಿ ವಹಿಸುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಮಹಿಳೆಯರಿಗೆ ನೀಡುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು, ರಾಜಕಾರಣದಲ್ಲಿನ ನಿಮಗೆ ಸಿಕ್ಕ ಅಧಿಕಾರವನ್ನು ಪುರುಷರಿಗೆ ನೀಡಿ, ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ, ನಿಮ್ಮ ಅಧಿಕಾರವನ್ನು ನೀವೆ ಚಲಾಯಿಸುವಂತಾದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಮಹಿಳೆಯರು ಎಂದರೆ ನಂಬಿಕೆ ಎಂಬ ಪರ್ಯಾಯ ಅರ್ಥ ಎನ್ನುವಂತಾಗಿದೆ, ಇಂದು ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಷ್ಟು ಎತ್ತರಕ್ಕೆ ಬೆಳೆಯಲು ನೀವೇ ಕಾರಣ, ನಿಮ್ಮ ಸಾಲ ಮರುಪಾವತಿಯ ಪ್ರಾಮಾಣಿಕತೆಯೇ ಬ್ಯಾಂಕ್ ಇಂದು ಧೈರ್ಯದಿಂದ ಸಾವಿರಾರು ಕೋಟಿ ಸಾಲ ನೀಡಿದೆ ಎಂದರು.


ತ್ಯಾಗಮಯಿ ಹೆಣ್ಣು ; ಸಕಲವೂ ಸ್ತ್ರೀಮಯ
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಭಾರತದಲ್ಲಿ ಹೆಣ್ಣನ್ನು ಆದಿಪರಾಶಕ್ತಿ ಎನ್ನುತ್ತಾರೆ. ಭಾರತಾಂಬೆ,ಕನ್ನಡಾಂಬೆ, ನದಿಗಳು, ಭೂಮಿ ಎಲ್ಲವೂ ಸ್ತ್ರೀಮಯವಾಗಿದೆ, ಅಕ್ಕ,ತಂಗಿ,ತಾಯಿಯಾಗಿ ಕುಟುಂಬವನ್ನು ಕಾಪಾಡುವ ಹೆಣ್ಣಿಗೆ ಬದುಕು ರೂಪಿಸಿಕೊಳ್ಳುವ ಶಕ್ತಿ ಇದೆ ಎಂದರು.
ಪುರುಷನ ನೆರಳಾಗಿ ಸೇವೆ ಸಲ್ಲಿಸುವ ತ್ಯಾಗಮಯಿ ಸ್ವರೂಪಿಯಾಗಿರುವ ಹೆಣ್ಣ ಯಾವೂದೇ ಪುರುಷನ ಸಾಧನೆಯ ಹಿಂದಿನ ಶಕ್ತಿಯಾಗಿದ್ದಾಳೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ, ಈ ನಿಟ್ಟಿನಲ್ಲಿ ಇಂದು ಡಿಸಿಸಿ ಬ್ಯಾಂಕ್ ಅಂತಹ ಹೆಣ್ಣಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಕುಟುಂಬ ನಿರ್ವಹಣೆಯ ಶಕ್ತಿ ನೀಡುತ್ತಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರಿಗೆ ಜವಾಬ್ದಾರಿವಹಿಸಿದರೆ ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಬ್ಯಾಂಕ್‍ನಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಮಹಿಳೆಯರ ಮೇಲಿನ ನಂಬಿಕೆಯಿಂದಲೇ ಇಂದು ಡಿಸಿಸಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯ ಕಲ್ಪಿಸುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.


ಮಹಿಳೆಯರೆಂದರೆ; ಸಾಧಕಿಯರು
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಾಧಕ ಮಹಿಳೆಯರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಯಾವುದೇ ಉನ್ನತ ಶಿಕ್ಷಣ ಫಲಿತಾಂಶ ನೋಡಿದರೂ ಬಾಲಕಿಯರೇ ಮೇಲುಗೈ ಎಂಬುದನ್ನು ಕಾಣುತ್ತಿದ್ದೇವೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಕಾಣಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಪ್ರಯೋಜನೆ ಪಡೆದುಕೊಂಳ್ಳಬೇಕು. ಡಿಸಿಸಿ ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ಸದುದ್ದೇಶಕ್ಕೆ ಬಳಸಿಕೊಂಡು ಸ್ವಾವಲಂಬಿಗಳಾಗಿ ಎಂದರು.
ಕಾರ್ಯಕ್ರಮದಲ್ಲಿ ಅಣ್ಣಿಹಳ್ಳಿ ಸೋಸೈಟಿ ಅಧ್ಯಕ್ಷ ನಾಗರಾಜ್, ಮುದುವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜಮ್ಮ, ಮುಖಂಡ ರಾಮಣ್ಣ,ಎಸ್.ವಿ.ಸುಧಾಕರ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್ ಮತ್ತಿತರರಿದ್ದರು
.