ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ 1 : ವಿದ್ಯೆಯು ಕದಿಯಲಾಗದ ಸಂಪತ್ತು , ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಅಂತಸ್ತು ಮಾಡುವುದರ ಬದಲು ವಿದ್ಯೆ ಎಂಬ ಸಂಪತ್ತನ್ನು ಮಾಡಿಕೊಡಿ ಎಂದು ಇಒ ಎಸ್.ಆನಂದ್ ಕರೆ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಶನಿವಾರ ಸ್ನೇಹ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯೆಯಂಬದನ್ನು ಸಹೋದರರೊಂದಿಗೆ ಆಗಲಿ, ಕಳ್ಳರಿಂದಾಗಲಿ, ರಾಜನಿಂದಗಾಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ವಿದ್ಯೆ ಎಂಬುದು ಗುಪ್ತವಾದ ಸಂಪತ್ತು. ವಿದ್ಯೆಯನ್ನು ಓದಿದಷ್ಟು (ಬಗಿದಷ್ಟು) ಜ್ಞಾನವು ಲಭಿಸುತ್ತದೆ ಎಂದರು.
ಮಾನವ ಕುಲವು ಜನನ, ಜೀವನ, ಮರಣದೊಂದಿಗೆ ಕಾಲಕಳೆಯಬೇಕಾಗಿದೆ. ಜನನವು ಆಕಸ್ಮಿಕ , ಬದುಕು ಅನಿವಾರ್ಯ, ಮರಣ ನಿಶ್ವಿತ ಎಂಬಂತೆ ಕಾಲಕಳೆಯಬೇಕು. ಇವುಗಳ ಮಧ್ಯೆ ಹುಟ್ಟು ಸಾವಿನ ನಡುವೆ ಏನಾದರೂ ಸಾಧನೆ ಮಾಡಬೇಕೆಂಬ ಛಲ, ಧ್ಯೇಯದೊಂದಿಗೆ ಬದುಕು ಸಾಗಿಸಬೇಕು.
ಶಾಸಕರ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲೆಗಳಿಗೆ ಶೌಚಾಗೃಹ, ಕಾಪೌಂಡ್, ಕಟ್ಟಡ ದುರಸ್ತಿ ಕಾರ್ಯ, ಕುಡಿಯುವ ನೀರು ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ . ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಎಸ್ಎಸ್ಎಲ್ಸಿ ಯು ನಿಮ್ಮ ಗುರಿಯ ಅಡಿಪಾಯ . ಗುರು ಹಿರಿಯರ ಮಾಗದರ್ಶನದೊಂದಿಗೆ ನಿಮ್ಮ ಗುರಿಯನ್ನು ಸಾಧಿಸಿ ಎಂದು ಅಭಿನಂದಿಸಿದರು. ಈ ಭಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲೂಕು ಪ್ರಥಮ ಸ್ಥಾನವನ್ನು ಪಡೆದಿರುವುದು ಸ್ವಾಗತರ್ಹ , ಮುಂದಿನ ದಿನಗಳಲ್ಲಿ ತಾಲೂಕು ರಾಜ್ಯಕ್ಕೆ ಪ್ರಥಮಸ್ಥಾನಕ್ಕಾಗಿ ಪ್ರಯತ್ನಿಸಣೋ ಎಂದು ಆಶಯ ವ್ಯಕ್ತಪಡಿಸಿದರು.
ಬಿಇಒ ಉಮದೇವಿ ಮಾತನಾಡಿ ಅಕ್ಷರ ಕಲಿಸಿದ ಗುರುಗಳಿಗೆ ಗೌರವವನ್ನು ಸೂಚಿಸಬೇಕು. ಎಷ್ಟೇ ವಿದ್ಯಾವಂತರಾಗಿ ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ವಿದ್ಯೆಯೊಂದಿಗೆ ವಿನಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ನಿರೀಕ್ಷಕ ಜಿ.ಎಸ್.ನಾರಾಯಣಸ್ವಾಮಿ ಮಾತನಾಡಿ ಈ ದೇಶಕ್ಕೆ ಮುಂದಿನ ಆಸ್ತಿ ಇಂದಿನ ಮಕ್ಕಳು. ವಿದ್ಯಾವಂತ ಮಕ್ಕಳಿಗೆ ಸಂಘ, ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಒಳ್ಳೇಯ ವಿದ್ಯಾವಂತರಾಗುತ್ತಾರೆ. ಒಳ್ಳೇಯ ವಿದ್ಯಾವಂತರೇ ದೇಶಕ್ಕೆ ಆಸ್ತಿ ಎಂದರು.
ಸ್ನೇಹ ಸಂಗಮ ಟ್ರಸ್ಟ್ನ ಅಧ್ಯಕ್ಷೆ ನಾಗವೇಣಿರೆಡ್ಡಿ ಮಾತನಾಡಿದರು. ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ , ಸ್ನೇಹ ಸಂಗಮ ಟ್ರಸ್ಟ್ನ ಕಾರ್ಯದರ್ಶಿ ಸಿ.ಮಂಜುನಾಥ್, ಖಾಜಾಂಚಿ ಕೆವಿಸಿ ರೆಡ್ಡಿ, ಸದಸ್ಯರಾದ ಕೆ.ಸಿ.ವೆಂಕಟರೆಡ್ಡಿ, ವಿಶ್ವನಾಥ್, ಸುಬ್ಬಾರೆಡ್ಡಿ, ಪ್ರಕಾಶ್, ಲಕ್ಷ್ಮೀನಾರಾಯಣ, ವರಲಕ್ಷ್ಮಿ ಹಾಗೂ ವಿದ್ಯಾಥಿಗಳ ಪೋಷಕರು ಇದ್ದರು.