ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ -ಡಾ || ಆರ್ . ಸೆಲ್ವಮಣಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ : ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು . ಸ್ವಯಂಪ್ರೇರಿತರಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸುವುದರ ಮೂಲಕ ಸಮಾಜಕ್ಕೆ ಸಹಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು .

ಇಂದು ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ , ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಇ.ಟಿ.ಸಿ.ಎಂ ನರ್ಸಿಂಗ್ ಕಾಲೇಜು , ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ವ್ಯಕ್ತಿ ರಕ್ತದಾನ ಮಾಡುವುದರಿಂದ ತನ್ನ ದೇಹದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ , ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅವರು ರೀತಿ ತಿಳಿಸಿದರು . ಪ್ರತಿ ದಿನ ಸುಮಾರು ಗರ್ಭಿಣಿ ಸ್ತ್ರೀಯರು , ಅಪಘಾತ ಒಳಗಾದವರಿಗೆ , ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಹಿಮೋಪೀಲಿಯಾ , ಕ್ಯಾನ್ಸರ್ ಹಾಗೂ ತ್ಯಾಲಸ್ಟಿಯಾ ರೋಗಿಗಳಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುತ್ತದೆ .
ಆದ್ದರಿಂದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು . ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು .

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ , ಮಾನವನ ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ . ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ . ರಕ್ತದಾನ ಮಾಡುವುದರ ಬಗ್ಗೆ ಜನರಲ್ಲಿ ಹೆಚ್ಚಿನ ಮೂಡನಂಬಿಕೆಯಿದೆ . ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಹಕ್ಕು , ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಮಾನೊಭಾವ ಪ್ರತಿಯೊಬ್ಬರಲ್ಲಿ ಮೂಡಬೇಕು . ಯುವಕ ಯುವತಿಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು . ರಕ್ತದಾನವನ್ನು ಎಲ್ಲರೂ ವರ್ಷದಲ್ಲಿ ಕನಿಷ್ಠ 2 ಮಾಡಬೇಕು . ರಕ್ತದಾನ ಮಾಡಬಯಸುವವರು ದಿನದ 24 ಗಂಟೆಗಳ ಅವಧಿಯಲ್ಲಿ ರಕ್ತನಿಧಿ ಕೇಂದ್ರಗಳಿಗೆ ಭೇಟಿ ನೀಡಿ ರಕ್ತದಾನ ಬಾರಿ ಮಾಡಬಹುದು ಎಂದು ಅವರು ತಿಳಿಸಿದರು .

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ ಕಮಲ ಅವರು ಮಾತನಾಡಿ , ಈ ವರ್ಷ ರಕ್ತದಾನ ಮಾಡಿ ಜಗತ್ತು ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ . ಕೋಲಾರ ಜಿಲ್ಲೆಯ ಜನಸಂಖ್ಯೆ ಸುಮಾರು 16 ಲಕ್ಷಗಳಿದ್ದು , ಪ್ರತಿವರ್ಷ ಸುಮಾರು 16,000 ಯೂನಿಟ್ ರಕ್ತಬೇಕಾಗಿರುತ್ತದೆ . ಜಿಲ್ಲೆಯಲ್ಲಿ 35 ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಸ್ಥಾಪನೆ ಮಾಡಲಾಗಿದ್ದು , ಅದರ ಮುಖಾಂತರ ರಕ್ತದಾನದ ಮಹತ್ವದ ಕುರಿತು ಅರಿವನ್ನು ಮೂಡಿಸಿ ರಕ್ತದಾನದ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ . ಸ್ವಯಂಸೇವಾ ಸಂಸ್ಥೆಗಳು , ಸಾರ್ವಜನಿಕರು ಕಾಲೇಜುಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ರಕ್ತದಾನವನ್ನು ಪ್ರೋತ್ಸಾಹಿಸಲಾಗುತ್ತಿದೆ . ಇಂದು ಜೈನ್ ಕಾಲೇಜು , ಕೆ.ಜಿ.ಎಫ್ , ಪವನ್ ನರ್ಸಿಂಗ್ ಕಾಲೇಜು ಮತ್ತು ಮಹೇಂದ್ರ ಏರೋಸ್ಪೇಸ್ , ನರಸಾಪುರ ಇಲ್ಲಿ ರಕ್ತದಾನದ ಶಿಬಿರವನ್ನು ಸಹ ಆಯೋಜಿಸಲಾಗಿದೆ . 18 ರಿಂದ 60 ವರ್ಷ ವಯಸ್ಸಿನವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಎಂದು ಅವರು ತಿಳಿಸಿದರು .

ಕಾರ್ಯಕ್ರಮದಲ್ಲಿ ಹೆಚ್.ಐ.ವಿ , ಏಡ್ಸ್ ಮತ್ತು ರಕ್ತದಾನದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು . ಜಿಲ್ಲೆಯ ವಿವಿಧ ರಕ್ತನಿಧಿ ಕೇಂದ್ರಗಳಲ್ಲಿ ಹಲವಾರು ಬಾರಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿರುವ ರಕ್ತದಾನಿಗಳನ್ನು ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ , ಜಿಲ್ಲಾ ಶಸ್ತ್ರಚಿಕಿತ್ಸಕಾರರಾದ ಡಾ | ರವಿಕುಮಾರ್ , ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಚಂದನ್ , ಇ.ಟಿ.ಸಿ.ಎಂ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ || ಜಾನ್‌ಸನ್‌ ಕಂದಾರ್ , ಇ.ಟಿ.ಸಿ.ಎಂ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ರೋಸ್‌ ಮೇರಿ , ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ || ರಮ್ಯಾ ದೀಪಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .