ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : – ಜಾತಿ , ಧರ್ಮ , ಮತ ಬೇಧ ಬಿಟ್ಟು ಪ್ರತಿ ಅನಕ್ಷರಸ್ಥರಿಗೂ ಅಕ್ಷರ ಕಲಿಸುವ ಮೂಲಕ ಸಂಪೂರ್ಣ ಸಾಕ್ಷರ ಗ್ರಾಮಗಳನ್ನಾಗಿಸವಂತೆ ಅಪರ ಜಿಲ್ಲಾಧಿಕಾರಿ ಹಾಗೂ ತಾಪಂ ಆಡಳಿತಾಧಿಕಾರಿ ಡಾ.ಸಿ.ವಿ.ಸ್ನೇಹಾ ಕರೆ ನೀಡಿದರು . ನಗರದ ತಾಪಂ ಕಚೇರಿ ಮುಂಭಾಗ ಅಂತರರಾಷ್ಟ್ರೀಯ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ , ಸಾಕ್ಷರತಾ ಪ್ರತಿಜ್ಞೆ ಬೋಧಿಸಿ ಮಾತನಾಡಿದ ಅವರು , ಸಾಕ್ಷರತೆಯಿಂದ ಮಾತ್ರವೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಮೂಡಿಸಿ ಎಂದು ಸಲಹೆ ನೀಡಿದರು . ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪ್ರತಿಮನೆಯ ಅಕ್ಷರಕಲಿಕಾ ಕೇಂದ್ರವಾಗಲಿ , ಪ್ರತಿಯೊಬ್ಬರೂ ಅಕ್ಷರಸ್ಥರಾಗಲಿ ಎಂಬ ಧೈಯದೊಂದಿಗೆ ಸಾಕ್ಷರತಾ ಪ್ರೇರಕರು ಕೆಲಸ ಮಾಡಬೇಕು ಎಂದರು . ಸರ್ಕಾರದ ಯೋಜನೆಗಳ ಕುರಿತು ಅರಿವು ಪಡೆಯಲು ಅಕ್ಷರ ಜ್ಞಾನದ ಅಗತ್ಯವಿದೆ ಎಂದ ಅವರು , ಇದೀಗ ತಂತ್ರಜ್ಞಾನ ಮುಂದುವರೆದಿದ್ದು , ಅಕ್ಷರದ ಜತೆಗೆ ಡಿಜಿಟಲ್ ಕಲಿಕೆಗೂ ಒತ್ತು ನೀಡಬೇಕಾಗಿದೆ ಎಂದು ಸೂಚಿಸಿದರು . ಸರ್ಕಾರದ ಅನೇಕ ಯೋಜನೆಗಳು ಅನಕ್ಷರಸ್ತರಿಗೆ ತಲುಪುವುದೇ ಇಲ್ಲ . ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆ ತೊಡೆದು ಹಾಕಲು ಸಾಧ್ಯವಿಲ್ಲ ಎಂದ ಅವರು , ಪ್ರತಿಯೊಬ್ಬರೂ ಸಾಕರರಾಗುವ ಗತ್ಯವಿದೆ ಎಂದು ತಿಳಿಸಿದರು .
ಲೋಕಶಿಕ್ಷಣ ಸಮಿತಿ ಕಾರ್ಯಕ್ರಮ ಸಹಾಯಕ ಡಿ.ಆರ್.ರಾಜಪ್ಪ ಮಾತನಾಡಿ , ಪ್ರತಿಯೊಬ್ಬರೂ ಸಾಕ್ಷರರಾದರೆ ಅಕ್ಷರದ ಜೊತೆಗೆ ಆರೋಗ್ಯ ಮತ್ತು ಅಭಿವೃದ್ದಿಯೂ ಜತೆಯಲ್ಲೇ ಅವರದ್ದಾಗುತ್ತದೆ ಎಂದು ತಿಳಿಸಿ ಅಕ್ಷರಜ್ಞಾನದಿಂದ ಬದುಕು ಉಜ್ವಲವಾಗುತ್ತದೆ ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಅಪರ ಡಿಸಿ ಡಾ.ಸ್ನೇಹಾ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು . ಕಾರ್ಯಕ್ರಮದಲ್ಲಿ ರತ್ನಮಾಲಾ ಮಹಿಳಾ ಮಂಡಳಿ ಕಾರ್ಯದರ್ಶಿ ರತ್ನಮಾಲಾ , ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಳಿನಿ , ತಾಲ್ಲೂಕು ಸಂಯೋಜಕ ಸಿ.ಅಶ್ವಥ್ , ಶ್ರೀರಾಮ್ , ಅರಾಬಿಕೊತ್ತನೂರು ರಾಮಚಂದ್ರಪ್ಪ , ಸಿಬ್ಬಂದಿ , ಕಲಿಕಾರ್ಥಿಗಳು , ಬೋಧಕರು ಹಾಜರಿದ್ದರು .