

ಶ್ರೀನಿವಾಸಪುರದಲ್ಲಿ, ರಾಜ್ಯ ಮಟ್ಟದ ಮಹಿಳಾ ಮಾಣಿಕ್ಯ ಪ್ರಶಸ್ತಿ ಪಡೆದ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಮಾಯಾ ಬಾಲಚಂದ್ರ ಪ್ರತಿಭೆಗೆ ಸಂದ ಪ್ರಶಸ್ತಿ
ಶ್ರೀನಿವಾಸಪುರ: ಪಟ್ಟಣದ ಸಪ್ತಸ್ವರ ಸಂಗೀತ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಮಟ್ಟದ ಮಹಿಳಾ ಮಾಣಿಕ್ಯ ಪ್ರಶಸ್ತಿ ಪಡೆದ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಮಾಯಾ ಬಾಲಚಂದ್ರ ಅವರು, ಪ್ರತಿಭಾವಂತ ಲೇಖಕಿಯಾಗಿ, ನಾಡಿನ ಸಾಹಿತ್ಯ ಪ್ರಿಯರ ಗಮನ ಸೆಳೆದಿದ್ದಾರೆ. ಈಗ ಅವರಿಗೆ ರಾಜ್ಯ ಮಟ್ಟದ ಮಹಿಳಾ ಮಾಣಿಕ್ಯ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಮಾಯಾ ಬಾಲಚಂದ್ರ ಯುವ ಸಮುದಾಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ಮಾತ್ರ ಬೆಳೆಯದೆ ಇತರರನ್ನು ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ತಾಲ್ಲೂಕಿನ ಪ್ರತಿಭಾವಂತರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಮಾತನಾಡಿ, ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದ ಮಾಯಾ ಬಾಲಚಂದ್ರ ಅವರು, ಗಡಿನಾಡಿನಲ್ಲಿ ಸಾಹಿತ್ಯ, ಸಂಗೀತ ಹಾಗೂ ಯೋಗ ತರಬೇತಿ ನೀಡುತ್ತಿದ್ದಾರೆ. ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವರು, ತಮ್ಮ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರಿಗೆ ಈಗಾಗಲೇ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳು ಬಂದಿವೆ. ರಾಜ್ಯ ಮಟ್ಟದ ಮಹಿಳಾ ಮಾಣಿಕ್ಯ ಪ್ರಶಸ್ತಿ ಅವರ ಪ್ರತಿಭೆಗೆ ಸಿಕ್ಕಿದ ಇನ್ನೊಂದು ಗರಿಯಾಗಿದೆ. ಲೇಖಕಿಯಾಗಿ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷಾಭಿವೃದ್ದಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ಕಾರ್ಯದರ್ಶಿ ಎಂ.ಬೈರೇಗೌಡ ಮಾಯಾ ಬಾಲಚಂದ್ರ ಅವರ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿದರು. ಸಾಹಿತ್ಯಾಸಕ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಟಿ.ವಿ.ನಟರಾಜ್, ಕಲಾ ಶಂಕರ್, ಡಾ.ಆರ್.ರವಿಕುಮಾರ್, ರಾಮಚಂದ್ರೇಗೌಡ, ಮುನೇಗೌಡ, ಬಿ.ವಿ.ಶೋಭಾ, ಲಕ್ಷ್ಮಿ, ಆರತಿ, ಬಾಲಚಂದ್ರ, ಎಂ.ವೆಂಕಟರವಣಪ್ಪ ಇದ್ದರು.