ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ :ಕೋಟೇಶ್ವರ ಸಮೀಪದ ಪುಟ್ಟ ಗ್ರಾಮ ನೇರಂಬಳ್ಳಿ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಲು ಕಾರಣ ಆಹಾರ – ಆತಿಥ್ಯ ಉದ್ಯಮದಲ್ಲಿ ಅಲ್ಲಿನವರ ಸಾಧನೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ನೇರಂಬಳ್ಳಿಯವರ ಹೋಟೆಲ್ ಸಮೂಹದ ಜಾಲ ಹರಡಿದೆ. ಇದರಲ್ಲಿ ದೊಡ್ಡ ಹೆಸರು ನೇರಂಬಳ್ಳಿ ನಾರಾಯಣ ರಾಯರದು. ಯಶಸ್ವೀ ಉದ್ಯಮಿ ಮಾತ್ರವಲ್ಲದೆ ಅವರು ಹೆಸರಿಗೆ ತಕ್ಕಂತೆ ದೇಣಿಗೆ, ಸಹಾಯ ಒದಗಿಸುವುದರಲ್ಲೂ ನಾರಾಯಣನೇ. ಹುಟ್ಟೂರು ಮಾತ್ರವಲ್ಲದೆ ಬೆಂಗಳೂರು ಹಾಗೂ ವಿವಿಧೆಡೆಗಳ ಸಂಘ – ಸಂಸ್ಥೆಗಳು, ದೇವಾಲಯಗಳು, ಕಷ್ಟದಲ್ಲಿರುವವರಿಗೆ ಸಹಾಯ ಒದಗಿಸುತ್ತಿದ್ದ ರಾಯರಿಗೆ ಅವರ ಸಮಾಜ ಸೇವೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ರಾಜ್ಯ ಹೋಟೆಲು ಮತ್ತು ಉಪಾಹಾರ ಮಂದಿರಗಳ ಮಾಲಕರ ಸಂಘದ ಅಧ್ಯಕ್ಷರಾಗಿ ನಾರಾಯಣ ರಾಯರು ಸಲ್ಲಿಸಿದ ಸೇವೆ ಈ ಕ್ಷೇತ್ರಕ್ಕೆ ಒಂದು ಅನನ್ಯ ಕೊಡುಗೆ ಎಂದು ಪತ್ರಕರ್ತ ಕೆ. ಜಿ. ವೈದ್ಯ ಹೇಳಿದರು.
ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ಶುಕ್ರವಾರ ನಡೆದ ಶ್ರೀ ಮಧ್ವ ನವಮಿ ಉತ್ಸವಾಚರಣೆಯ ಸಂದರ್ಭದಲ್ಲಿ, ಇತ್ತೀಚೆಗೆ ಅಗಲಿದ ನೇರಂಬಳ್ಳಿ ನಾರಾಯಣ ರಾಯರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳಾಗಿಯೂ ದುಡಿದ ನಾರಾಯಣ ರಾಯರು ಎಂದೂ ವಿವಾದಗಳಿಗೆ ಗುರಿಯಾದವರಲ್ಲ. ಅವರಿದ್ದಾರೆ ಎಂಬ ಧೈರ್ಯದಿಂದಲೇ ದೊಡ್ಡ ಮಟ್ಟದ ಕಾರ್ಯಕ್ರಮಗಳು, ದೇವಳ ಇತ್ಯಾದಿಗಳ ಜೀರ್ಣೋದ್ಧಾರ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾದ ಉದಾಹರಣೆಗಳು ಹಲವಾರಿವೆ. 94 ವರ್ಷಗಳ ತುಂಬು ಜೀವನ ನಡೆಸಿದ ನಾರಾಯಣ ರಾಯರ ಜೀವನಾದರ್ಶ, ಸಾಮಾಜಿಕ ಕಳಕಳಿ, ಧರ್ಮ ಜಾಗೃತಿ ಇಂದಿನ ಯುವಜನತೆಗೆ ಒಂದು ಆದರ್ಶ ಎಂದ ಅವರು, ರಾಯರ ಜೀವನಗಾಥೆಯನ್ನೇ ತೆರೆದಿಟ್ಟರು. ಅವರ ಪುತ್ರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ರಾಘವೇಂದ್ರ ರಾವ್ ತಂದೆಯ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಅಗಲಿದ ನಾರಾಯಣ ರಾಯರ ಆತ್ಮಕ್ಕೆ ಸದ್ಗತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇವಳದ ಪ್ರಧಾನ ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್ ಮಾತನಾಡಿ ಮಧ್ವಾಚಾರ್ಯರ ತತ್ವೋಪದೇಶಗಳ ಬಗ್ಗೆ ಬೆಳಕು ಚೆಲ್ಲಿದರು. ಪೊಡವಿಗೊಡೆಯ ಶ್ರೀ ಕೃಷ್ಣ ಉಡುಪಿಯಲ್ಲಿ ನೆಲೆನಿಲ್ಲಲು ಆಚಾರ್ಯ ಮಧ್ವರು ಹೇಗೆ ಕಾರಣರಾದರು ಎಂಬ ಬಗ್ಗೆ ವಿವರಿಸಿದರು.
ಶ್ರೀ ಕೋದಂಡರಾಮ ಮಂದಿರ ಆಡಳಿತ ಸಮಿತಿಯ ಅಧ್ಯಕ್ಷ ಎಚ್. ಶ್ರೀನಿವಾಸ ಮೂರ್ತಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಗೋಪಾಲ ಬಿಳಿಯ ಉಪಸ್ಥಿತರಿದ್ದರು. ಸೀತಾರಾಮ ಧನ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಜಗದೀಶ್ ರಾವ್ ವಂದಿಸಿದರು.