ಶ್ರೀನಿವಾಸಪುರ: ತಾಲ್ಲೂಕಿನ ಇಮರಕುಂಟೆ ಗ್ರಾಮದ ಶಿಕ್ಷಣ ತಜ್ಞ ಹಾಗೂ ಭೈರವೇಶ್ವರ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ತಮ್ಮ ಕಣ್ಣುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾನ ಮಾಡುವುದರ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಅವರು ಪಟ್ಟಣದ ವೆಂಕಟೇಶ್ವರ ನಸಿರ್ಂಗ್ ಹೋಂನಲ್ಲಿ ಗುರುವಾರ ರಾತ್ರಿ ಹೃದಯಾಘಾತದಿಂದ ಮರಣಹೊಂದಿದ ಮೇಲೆ, ಜಾಲಪ್ಪ ಆಸ್ಪತ್ರೆ ವೈದ್ಯರು ಆಗಮಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಕಣ್ಣು ಪಡೆದುಕೊಂಡರು.
ಎಂ.ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರವನ್ನು ಶುಕ್ರವಾರ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್, ನಾಟಕಕಾರ ಕೆ.ರಾಮಯ್ಯ, ವಿಧಾನ ಸಭೆ ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಸ್.ವಿ.ಮುನಿವೆಂಕಟಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಸ್ಥಳೀಯ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ, ಬಿಇಒ ಮುನಿಲಕ್ಷ್ಮಯ್ಯ ಮುಖಂಡ ಸಿಎಂಆರ್ ಶ್ರೀನಾಥ್ ದರ್ಶನ ಪಡೆದ ಪ್ರಮುಖರು.
ನೂರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾರ್ಥೀವ ಶರೀರದ ದರ್ಶನ ಪಡೆದ ಬಳಿಕ, ಪಟ್ಟಣ ಎಂಜಿ ರಸ್ತೆಯಲ್ಲಿ ಪಾರ್ಥೀವ ಶರೀರವನ್ನು ವಾಹನದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಮೆರವಣಿಗೆ ಮುಗಿದ ಮೇಲೆ, ಪಾರ್ಥೀವ ಶರೀರವನ್ನು ಇಮರಕುಂಟೆಗೆ ಕೊಂಡೊಯ್ದು ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.