ಶ್ರೀನಿವಾಸಪುರ: ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಕಚೇರಿಗೆ ಮಂಗಳವಾರ ಲೋಕಾಯುಕ್ತ ಡಿವೈಎಸ್ಪಿ ಸೂರ್ಯನಾರಾಯಣ ರಾವ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಎರಡನೇ ವರ್ಗಾವಣೆ ಪತ್ರ ಹಾಗೂ ಅಂಕಪಟ್ಟಿಗಾಗಿ ಅರ್ಜಿ ಸಲ್ಲಿಸಿದ ಹಳೆ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ, ಶಾಲಾ ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಲಾಯಿತು ಎಂದು ಲೋಕಾಯುಕ್ತ ಡಿವೈಎಸ್ಪಿ ಸೂರ್ಯನಾರಾಯಣ ರಾವ್ ತಿಳಿಸಿದರು.
ವಿಷಯಕ್ಕೆ ಸಂಬಂಧಿಸಿದಂತೆ ಶುಲ್ಕ ವಿವರ ಮತ್ತು ಎರಡನೆ ಸಲ ವರ್ಗಾವಣೆ ಪತ್ರ ಹಾಗೂ ಅಂಕಪಟ್ಟಿ ಪಡೆದುಕೊಳ್ಳಬೇಕಾದಾಗ ಅನುಸರಿಸಬೇಕಾದ ವಿಧಿ ವಿಧಾನ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ಕೇಳಲಾಗುವುದು ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲೆ ರಾಧಾಮಣಿ ಹಾಗೂ ಕಚೇರಿ ಸಿಬ್ಬಂದಿ ಇದ್ದರು.