

ಕುಂದಾಪುರ: ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬುಧವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಚೇರಿಯಲ್ಲಿ ಲಿಪಿಕ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು ಪೂಜಾರಿ ಎಂಬವರು ನಾಗರಿಕರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ವಾಹನವೊಂದು ಅರಣ್ಯ ಇಲಾಖೆಯಿಂದ ಮುಟ್ಟುಗೋಲಾಗಿದ್ದು ಅದನ್ನು ಬಿಡಿಸುವ ಸಂಬಂಧ ಕಡತವನ್ನು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಲು ಮಂಜು ಪೂಜಾರಿ ಲಂಚದ ಬೇಡಿಕೆಯಿಟ್ಟಿದ್ದರು. ಮಾತುಕತೆ ಪ್ರಕಾರ ಕಚೇರಿ ವೇಳೆಯಲ್ಲಿ ಲಂಚ ಪಡೆಯುತ್ತಿದ್ದಾಗಲೇ ದಾಳಿ ನಡೆದಿದೆ. ನಗದು ಸಹಿತ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.