ಕೋಲಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸ್ವೀಪ್ ಹಾಗೂ ಕೋಲಾರ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ “ಚುನಾವಣಾ ಪರ್ವ ಮೂಲಕ – ದೇಶದ ಗರ್ವ” ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನಗರದ ಗಾಂಧಿ ಚೌಕ್ ಬಳಿ ಪಂಜು ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೊಂಬತ್ತಿ ಜಾಥಾಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಅಕ್ರಂ ಪಾಷ ಅವರು ಚಾಲನೆ ನೀಡಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಅರ್ಹ ಮತದಾರನು ಏಪ್ರಿಲ್-26 ರಂದು ನಡೆಯುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಸದೃಢ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣರಾಗಬೇಕು ಎಂದು ತಿಳಿಸಿದರು.
ಕಳೆದ ಬಾರಿ ಕ್ಷೇತ್ರದಲ್ಲಿ ಎಲ್ಲೆಲ್ಲಿ ಮತದಾನ ಕಡಿಮೆ ಆಗಿದೆಯೋ ಅಂತಹ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಕ್ರಮ ವಹಿಸುತ್ತಿದ್ದೇವೆ ಹಾಗೂ ಕಡ್ಡಾಯವಾಗಿ ಮತಗಟ್ಟೆಗೆ ಕರೆತರಲು ಕಾರ್ಯಕ್ರಮಗಳನ್ನು ರೂಪಿಸಿ ಪ್ರೇರೇಪಿಸುತ್ತಿದ್ದೇವೆ ಎಂದರು. ಈ ಮೂಲಕ ಎಲ್ಲಾ ಮತದಾರರು ತಮ್ಮ ನೆರೆಹೊರೆಯ ಮತದಾರರನ್ನು ಸಹ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನಹೊಲಿಸಬೇಕು ಎಂದು ಮನವಿ ಮಾಡಿದರು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಂಡು ಮತದಾನದ ಪ್ರಮಾಣವನ್ನು ಶೇಕಡಾವಾರು ಹೆಚ್ಚಿಸಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಬರಲು ಶ್ರಮಿಸಬೇಕೆಂದು ತಿಳಿಸಿದರು.
ನಗರದ ಗಾಂಧಿ ವನದಿಂದ ಎಂ.ಜಿ ರಸ್ತೆ ಮಾರ್ಗವಾಗಿ ಅಮ್ಮವಾರಿ ಪೇಟೆ ಸರ್ಕಲ್ ವರೆಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೊಂಬತ್ತಿ ಹಿಡಿದು ಜಾಥಾದಲ್ಲಿ ಪಾಲ್ಗೊಂಡರು. ರಸ್ತೆಯ ಎಲ್ಲಾ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ನೈತಿಕ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗಾರಡಿಗೊಂಬೆ ಕಲಾವಿದರು ಮತ್ತು ಮಾರ್ಜೇನಹಳ್ಳಿ ಮುನಿಸ್ವಾಮಿ ಮತ್ತು ತಂಡದಿಂದ ವಿಶೇಷವಾಗಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಇನ್ನೂ ಜಾಥಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷರು ಹಾಗೂ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪದ್ಮ ಬಸವಂತಪ್ಪ, ಸಹಾಯಕ ಕಮೀಷನರ್ ಶ್ರೀಮತಿ ವೆಂಕಟಲಕ್ಷ್ಮಿ, ತಾಲೂಕು ಸ್ವೀಪ್ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಜೋಸೆಪ್, ತಹಶಿಲ್ದಾರರು ಶ್ರೀ ಹರ್ಷವರ್ದನ್, ನಗರಸಭೆ ಆಯುಕ್ತ ಶಿವಾನಂದ ಹಾಗೂ ತಾಲೂಕಿನ ಎಲ್ಲಾ ಆರ್.ಡಿ.ಪಿಆರ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.