ಲೋಕಸಭಾ ಚುನಾವಣೆ ಘೋಷಣೆ:ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ
ಕೋಲಾರ : ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಹೇಳಿದರು.
ಇಂದು ತಮ್ಮ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೋಲಾರ ಕ್ಷೇತ್ರಕ್ಕೆ ಮಾರ್ಚ್ 28 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಏಪ್ರಿಲ್ 04 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏಪ್ರಿಲ್ 05ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 08 ಕೊನೆಯ ದಿನವಾಗಿದೆ.
ಏಪ್ರಿಲ್ 26ಕ್ಕೆ ದಕ್ಷಿಣ ಕರ್ನಾಟಕದ ಭಾಗಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ್ಯಂತ 2100 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 816475 ಪುರುಷರು ಮತ್ತು 812149 ಮಹಿಳೆಯರು ಇತರರು 158 ಸೇರಿ 1628782 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ, ಹಿರಿಯರು ಮತ್ತು ವಿಕಲಚೇತನರಿಗೆ ಯಾರ್ಂಪ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮತದಾನ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಅಥವಾ ಬುರ್ಖಾ ಧರಿಸುವಂತಿಲ್ಲ ಎಂದು ಡಿ.ಸಿ.ಅಕ್ರಂ ಪಾಷ ಸ್ಪಷ್ಟನೆ ನೀಡಿದರು.
ಮಾದರಿ ನೀತಿ ಸಂಹಿತೆ ತಕ್ಷಣದಿಂದಲೆ ಜಾರಿಯಾಗಿರುವುದರಿಂದ ರಾಜಕೀಯ ಸಭೆ, ಸಮಾರಂಭಕ್ಕೆ ಪರವಾನಿಗೆ ಕಡ್ಡಾಯವಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಡೆಯುವ ಜಯಂತಿಗಳು ಪೂಜೆಗೆ ಸೀಮಿತವಾಗಿ ಸರಳಾಚರಣೆ ಮಾಡಲಾಗುತ್ತದೆ. ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸರ್ಕಾರದಿಂದ ನೀಡಲಾದ ಎಲ್ಲಾ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುತ್ತದೆ.
ಸರ್ಕಾರಿ ಅಧಿಕಾರಿಗಳು, ನೌಕರರಿಗೆ ರಜೆ ನಿಬರ್ಂಧಿಸಿದ್ದು, ಕೇಂದ್ರಸ್ಥಾನ ಬಿಡುವಂತಿಲ್ಲ. ಜಿಲ್ಲೆಯಿಂದ ವರ್ಗಾವಣೆ ಮಾಡುವಂತಿಲ್ಲ. ಅತಿಥಿಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಸಾರ್ವಜನಿಕರಿಗೆ ಪ್ರವಾಸಿ ಮಂದಿರದಲ್ಲಿ ನಿಷೇಧಿಸಲಾಗಿದೆ ಎಂದರು.
ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
2024ರ ಚುನಾವಣೆ ವಿಶೇಷ:
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತವರಿಗೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಶೇ.50ರಷ್ಟು ಮತಗಟ್ಟೆಯಲ್ಲಿ ಸಿ.ಸಿ.ಟಿ.ವಿ. ಕಣ್ಣಾವಲು ಇರಲಿದೆ. ಮಹಿಳಾ ಸ್ನೇಹಿಯಾಗಿ 30ಸಖಿ ಪಿಂಕ್ ಬೂತ್ ಇರಲಿವೆ.
ಇದಲ್ಲದೆ ವಿಲಚೇತನರೇ ಕಾರ್ಯನಿರ್ವಹಿಸುವ 9 ಮತಗಟ್ಟೆಗಳು ಮತ್ತು 20ರ ಆಸುಪಾಸು ಯುವಕ-ಯುವತಿ ಸಿಬ್ಬಂದಿಯಿಂದ ಕೂಡಿದ 6 ಮತಗಟ್ಟೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.
90 ಲಕ್ಷ ಖರ್ಚು ಮಿತಿ:
ಲೋಕಸಭಾ ಕ್ಷೇತ್ರದ ಪ್ರತಿ ಅಭ್ಯರ್ಥಿಗೆ 90 ಲಕ್ಷ ರೂ. ಖರ್ಚಿನ ಮಿತಿ ನಿಗದಿಪಡಿಸಿದ್ದು, ಪಕ್ಷಕ್ಕೆ ಮಿತಿ ಇರುವುದಿಲ್ಲ. ಇದು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಕತಾಣಗಳ ಮೂಲಕ ಮಾಡುವ ಜಾಹೀರಾತನ್ನು ಸಹ ಒಳಗೊಂಡಿದೆ ಎಂದು ಡಿ.ಸಿ. ತಿಳಿಸಿದರು.
ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ:
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸುದ್ದಿ ಪ್ರಕಟಣೆ, ಬಿತ್ತರಣೆ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನಿಗಾ ವಹಿಸಲು ಎಂ.ಸಿ.ಎಂ.ಸಿ. ಸಮಿತಿ ರಚಿಸಿಲಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸೆಲ್ ಸಹ ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಹೋಡಿರ್ಂಗ್ಸ್, ಬಂಟಿಂಗ್ಸ್ ತೆರವಿಗೆ ಸೂಚನೆ:
ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳು ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾನರ್ಸ್, ಭಿತ್ತಿಪತ್ರ, ಕಟೌಟ್ಗಳನ್ನು ಕೂಡಲೆ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದರು.
28 ಚೆಕ್ ಪೋಸ್ಟ್ ಸ್ಥಾಪನೆ:
ಜಿಲ್ಲೆಯಾದ್ಯಂತ 28 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಇದರಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ 10 ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್ ಮತ್ತು ಕೋಲಾರ ಪೊಲೀಸ್ ವ್ಯಾಪ್ತಿಯಲ್ಲಿ 18ಚೆಕ್ ಪೋಸ್ಟ್ಗಳಿವೆ. ಇದಲ್ಲದೆ ಜಿಲ್ಲೆಯಲ್ಲಿ ಸೆಕ್ಟರ್ ಅಧಿಕಾರಿಗಳು, 108ಸ್ಟಾಟಿಕ್ ಸರ್ವೆಲೆನ್ಸ್ ತಂಡ, 57 ಫೈಯಿಂಗ್ ಸ್ವಾಡ್ ತಂಡ, 22ವಿ.ಎಸ್.ಟಿ. ತಂಡ, 8ವಿ.ವಿ.ಟಿ. ತಂಡ, 8ಅಕೌಂಟ್ ತಂಡ ರಚಿಸಲಾಗಿದೆ.75 ವಲನರೇಬಲ್ ಮತಗಟ್ಟೆ ಎಂದು ಗುರುತಿಸಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಲಾರ ಎಸ್.ಪಿ.ಎಂ ನಾರಾಯಣ, ಕೆ.ಜಿ.ಎಫ್ ಎಸ್.ಪಿ ಶಾಂತಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಾಣಿಕ್ಯಾಳ್ ಇದ್ದರು.