ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿಸೆಂಬರ್ 18 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಂಡಿದ್ದು , ನವೆಂಬರ್ 17 ರಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪೂರ್ವ ಸಂಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಆರ್.ನಾಗರಾಜ ಅವರು ತಿಳಿಸಿದರು .
ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಸಮಾಜ ಸುವ್ಯವಸ್ಥೆಯಾಗಿರಬೇಕಾದರೆ ವ್ಯಾಜ್ಯಗಳು ಕಡಿಮೆಯಾಗಬೇಕು , ಸಾರ್ವಜನಿಕರು ನೆಮ್ಮದಿಯಾಗಿ ಜೀವನ ನಡೆಸಬೇಕು , ಪ್ರಜಾಪ್ರಭುತ್ವ ಸುಭದ್ರವಾಗಿರಬೇಕೆಂದರೆ ಪ್ರಜೆಗಳು ಪ್ರಜ್ಞಾವಂತರಾಗಬೇಕು . ಪ್ರತಿಯೊಬ್ಬ ನಾಗರಿಕರು ಕಾನೂನಿನ ಅರಿವು ಪಡೆದುಕೊಂಡರೆ ಕಾನೂನು ವ್ಯವಸ್ಥೆ ಸುಸ್ಥಿರವಾಗಿರುತ್ತದೆ ಎಂದು ಅವರು ತಿಳಿಸಿದರು . ಲೋಕ್ ಅದಾಲತ್‌ನಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿ ಆಗಬಹುದಾದ ಪ್ರಕರಣಗಳನ್ನು , ಚೆಕ್ ಅಮಾನ್ಯ ಪ್ರಕರಣಗಳು , ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು , ಮೋಟರ್ ವಾಹನ ಅಪಘಾತ ಪ್ರಕರಣಗಳು , ಕಾರ್ಮಿಕರ ಪ್ರಕರಣಗಳು , ವಿದ್ಯುತ್ ಕಳ್ಳತನ ಪ್ರಕರಣಗಳು , ಮರಳು ಕಳ್ಳತನ ಪ್ರಕರಣಗಳು , ವೈವಾಹಿಕ ಪ್ರಕರಣಗಳು , ಸಿವಿಲ್ ದಾವೆ , ಜನನ ಮತ್ತು ಮರಣ ನೊಂದಣಿ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳಾದ ವಿದ್ಯುತ್ , ನೀರು , ಬಿಎಸ್‌ಎನ್‌ಎಲ್ ಬಿಲ್ ಪಾವತಿ ಪ್ರಕರಣಗಳನ್ನು ರಾಜಿ ಮಾಡಲಾಗುವುದು ಎಂದು ಅವರು ತಿಳಿಸಿದರು . ಕೋಲಾರ ಜಿಲ್ಲೆಯಲ್ಲಿ 30 ನ್ಯಾಯಾಲಯಗಳಿದ್ದು ಒಟ್ಟು 40,106 ಪ್ರಕರಣಗಳಿವೆ . ಅವುಗಳಲ್ಲಿ ಸಿವಿಲ್ 23,405 ಮತ್ತು ಕ್ರಿಮಿನಲ್ 16,701 ಪ್ರಕರಣಗಳಿವೆ . ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಒಟ್ಟು 685 ಪ್ರಕರಣಗಳು , 5160 ಚೆಕ್ ಅಮಾನ್ಯ ಪ್ರಕರಣಗಳು , 637 ಮೋಟರ್ ವಾಹನ ಅಪಘಾತ ಪ್ರಕರಣಗಳು ಮತ್ತು 5037 ವಿಭಾಗದ ದಾವೆ ಪ್ರಕರಣಗಳಿವೆ ಅವುಗಳಲ್ಲಿ 6320 ಪ್ರಕರಣಗಳು ರಾಜಿಯಾಗಬಹುದು ಎಂದು ಅವರು ತಿಳಿಸಿದರು . ಲೋಕ್ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ . ಎರಡು ಪಕ್ಷಗಾರರು ನೆಮ್ಮದಿಯಿಂದ ಜೀವನ ಮಾಡಬಹುದು . ನ್ಯಾಯಾಲಯದ ಶುಲ್ಕವನ್ನು ಸಹ ಪಕ್ಷಗಾರರಿಗೆ ವಾಪಸ್ ನೀಡಲಾಗುವುದು ಆದ್ದರಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್‌ನ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು . ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್ . ಗಂಗಾಧರ ಅವರು ಉಪಸ್ಥಿತರಿದ್ದರು .