ಕೋಲಾರ ಡಿಸಿಸಿ ಬ್ಯಾಂಕಿನಿಂದ ಪುರುಷ ಸಂಘಗಳಿಗೂ ಸಾಲ ಸೌಲಭ್ಯ
ಮರುಪಾವತಿಯಲ್ಲಿ ನಂಬಿಕೆ ಉಳಿಸಿಕೊಳ್ಳಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಮಹಿಳೆಯರಂತೆ ಪುರುಷರು ಸಾಲ ಮರುಪಾವತಿಯಲ್ಲಿ ನಂಬಿಕೆ ಉಳಿಸಿಕೊಂಡರೆ ಮತ್ತಷ್ಟು ಪುರುಷ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.
ನಗರದ ಖಾದ್ರಿಪುರ ಬಡಾವಣೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಪುರುಷ ಸಂಘಗಳಿಗೆ ಸಾಲ ವಿತರಿಸಿ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ಉಳಿಸಿ ಬೆಳೆಸಿದವರೇ ಮಹಿಳೆಯರು, ಅವರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಹಿರಿಮೆ ಕಾಪಾಡಿದ್ದಾರೆ ಎಂದರು.
ಪುರುಷರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯವಿರುವ ಸಾಲವನ್ನು ಒದಗಿಸಲು ಬ್ಯಾಂಕ್ ಸಿದ್ದವಿದೆ ಎಂದ ಅವರು, ಸಾಲ ಮರುಪಾವತಿಯಲ್ಲಿ ವಿಳಂಬ ತೋರುತ್ತಾರೆ ಎಂಬ ಅಪವಾದದಿಂದ ಮುಕ್ತವಾಗಲು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ಹೆಚ್ಚು ಮಂದಿ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿದೆ, ಇದರಿಂದ ಅನೇಕ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ಅನೇಕರು ಸ್ವಾವಲಂಬಿ ಜೀವನ ನಡೆಸಲು ಈ ಸಾಲ ನೆರವಾಗಿದೆ, ಅದೇ ರೀತಿ ಪುರುಷ ಸಂಘಗಳಿಗೆ ಸಾಲ ನೀಡಿದ್ದು ನಾವೇ ಮೊದಲು ಎಂದರು.
ಈಗಾಗಲೇ ಹಲವಾರು ಪುರುಷ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಿದ್ದು, ಮರುಪಾವತಿ ಸಮರ್ಪಕವಾಗಿದೆ ಎಂದು ತಿಳಿಸಿದ ಅವರು, ನೀವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಬಡ್ಡಿಯ ಸಂಕಷ್ಟದಿಂದ ಪಾರಾಗಬಹುದು, ಕಂತು ತಡವಾದರೆ ಬಡ್ಡಿ ಬೀಳುತ್ತದೆ ಎಂದು ಎಚ್ಚರಿಸಿದರು.
ಸಾಲ ಪಡೆಯಲು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಮಾಡಿದ್ದೇವೆ, ನಿಮ್ಮ ಉಳಿತಾಯ ಖಾತೆಗೆ ನಿಮ್ಮ ಸಾಲದ ಹಣ ಜಮಾ ಆಗುವಂತೆ ಕ್ರಮ ಕೈಗೊಂಡಿದ್ದೇವೆ, ನೀವು ಯಾವ ದಲ್ಲಾಳಿಗೂ ಲಂಚ ನೀಡುವ ಅಗತ್ಯವಿಲ್ಲ, ಎಲ್ಲವೂ ಪಾರದರ್ಶಕವಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ವಿರುದ್ದ ಟೀಕಾಕಾರರು ಕೆಲಸ ಮಾಡುತ್ತಿದ್ದಾರೆ, ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ, ನಾವು ತಪ್ಪು ಮಾಡಿದ್ದರೆ ಸಾಕ್ಷಿಸಹಿತ ತಿಳಿಸಲಿ ಅದು ಬಿಟ್ಟು ಬ್ಯಾಂಕ್ ವಿರುದ್ದ ಸಲ್ಲದ ಟೀಕೆ ಮಾಡಿ ಬ್ಯಾಂಕಿನ ಘನತೆಗೆ ಕುತ್ತು ತರುತ್ತಿದ್ದಾರೆ ಎಂದು ವಿಷಾದಿಸಿದರು.

ಸಾಲಕ್ಕಾಗಿ ಮಾತ್ರವೇ ಡಿಸಿಸಿ ಬ್ಯಾಂಕ್ ಅಲ್ಲ


ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಕೇವಲ ಸಾಲಕ್ಕಾಗಿ ಮಾತ್ರ ಡಿಸಿಸಿ ಬ್ಯಾಂಕ್ ಎಂಬ ಭಾವನೆ ಬಿಟ್ಟುಬಿಡಿ, ನಿಮ್ಮ ಉಳಿತಾಯ, ವಹಿವಾಟನ್ನು ಇದೇ ಬ್ಯಾಂಕಿನಲ್ಲಿ ಮಾಡಿದರೆ ನಿಮಗೆ ಮತ್ತಷ್ಟು ಸಾಲ ಸಿಗಲಿದೆ ಎಂದು ತಿಳಿಸಿದರು.
ವಾಣಿಜ್ಯ ಬ್ಯಾಂಕುಗಳು ನಿಮಗೆ ಭದ್ರತೆ ಇಲ್ಲದೇ ಸಾಲ ನೀಡೋಲ್ಲ ಜತೆಗೆ ನಿಮ್ಮನ್ನು ಸಾಲಕ್ಕಾಗಿ ಅಲೆದಾಡಿಸುತ್ತಾರೆ, ಅಂತಹ ದುಸ್ಥಿತಿ ಡಿಸಿಸಿ ಬ್ಯಾಂಕಿನಲ್ಲಿ ಇಲ್ಲ, ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿದ್ದೇವೆ, ಇದನ್ನು ಸದ್ಬಳಕೆ ಮಾಡಿಕೊಳ್ಳಿ, ಸಾಲವನ್ನು ಸರಿಯಾಗಿ ಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಾಲವನ್ನು ಈ ಭಾಗದ ಮಹಿಳೆಯರ ಮೂಲಕವೇ ವಿತರಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಸಾಲ ಮರುಪಾವತಿಗೆ ಅವರನ್ನು ಆದರ್ಶವಾಗಿ ಪಾಲಿಸಿ ಎಂದು ತಿಳಿಸಿದ್ದಾರೆ, ಹಿಂದೆ ಬ್ಯಾಂಕ್ ಮುಳುಗಿಹೋದಾಗ ಯಾರೂ ಇತ್ತ ಸುಳಿಯಲಿಲ್ಲ, ಇದೀಗ ಬ್ಯಾಂಕ್ ಅಭಿವೃದ್ದಿಯಾದ ನಂತರ ದಿನವೂ ಟೀಕೆ ಮಾಡುವವರು ಇದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್, ಸ್ಥಳೀಯ ಮುಖಂಡರಾದ ವಿಶ್ವನಾಥ್, ರಾಮು, ಬೆಟ್ಟಪ್ಪ ಮತ್ತಿತರರಿದ್ದರು.