ಕುಂದಾಪುರ: ಒಳ್ಳೆಯ ಸಂಸ್ಕಾರದೊಂದಿಗೆ ಸಮಾಜದೊಳಗೆ ಒಂದಾಗಿ ಒಗ್ಗಟ್ಟಾಗಿ ಜೀವಿಸಿ ಜೀವನವನ್ನು ಕಟ್ಟಿಕೊಳ್ಳಿ ಎಂದು ಪದ್ಮಶ್ರೀ ಖ್ಯಾತ ಮನೋವೈದ್ಯ ಡಾ ಸಿ.ಆರ್.ಚಂದ್ರಶೇಖರ ಅವರು ಹೇಳಿದರು.
ಅವರು ಮೇ 27ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಒತ್ತಡ ರಹಿತ ಜೀವನ” ಎಂಬ ವಿಷಯದ ಕುರಿತು ಮಾತನಾಡಿದರು.
ಮನುಷ್ಯನಿಗೆ ಮುಖ್ಯವಾಗಿ ಉತ್ತಮ ಸಾಮಾಜಿಕ ಸಂಪರ್ಕ ಅಗತ್ಯವಾಗಿ ಬೇಕು. ಅದು ಮನೆಗೆ ಮಾತ್ರ ಸೀಮಿತವಾಗಿರದೆ ಸಮಾಜದೊಳಗೂ ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲದೆ ಧೂಮಪಾನ ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಬೇಡಿ. ಪ್ರಾಮಾಣಿಕತೆ ಮತ್ತು ಒಳ್ಳೆಯತನದಿಂದ ಬದುಕಬೇಕು. ಸಮಾಜದಲ್ಲಿ ಅಂತಹವರನ್ನು ಗುರುತಿಸುವುದುರೊಂದಿಗೆ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಲೆಕ್ಕ ಪರಿಶೋಧಕ ಡಾ.ನಾಗರಾಜ ಆಚಾರ್ ಅವರು “ಯಶಸ್ವಿ ಜೀವನದ ಸೂತ್ರಗಳು” ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಮತ್ತು ಮಾಲಿಗ ಆಚಾರ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಮನಃಶಾಸ್ತ್ರ ಉಪನ್ಯಾಸಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಸುಮಲತಾ ಮತ್ತು ಜ್ಯೋತಿ ಅಲ್ಸೆ ಪರಿಚಯಿಸಿದರು.