ಶ್ರೀನಿವಾಸಪುರ: ಸಾಹಿತ್ಯ ಸಮಾಜದಲ್ಲಿ ಮಾನವೀಯತೆ ಬೆಳೆಸುವ ಸಾಧನವಾಗಬೇಕು ಎಂದು ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಸುಗಟೂರಿನ ಗೆಳೆಯರ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರಿಗೆ ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾಹಿತಿ ತನ್ನ ಬದುಕು ಮತ್ತು ಬರಹದ ಮಧ್ಯೆ ಸಮನ್ವಯ ಸಾಧಿಸಬೇಕು. ಬರೆದಂತೆ ಬದುಕಿದಾಗ ಮಾತ್ರ ಸಾಮಾಜಿಕ ಮನ್ನಣೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಮಾದರಿಯಾಗಿದ್ದಾರೆ. ಅವರ ಬರಹಗಳು ಸಮಾಜ ಮುಖಿಯಾಗಿದ್ದು, ಜೀವನ ಪ್ರೀತಿ ಉಂಟುಮಾಡುತ್ತವೆ. ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯ ಪ್ರಧಾನ ಅಂಶವಾಗಿದೆ ಎಂದು ಹೇಳಿದರು.
ಅವರು ನಾಲ್ಕು ದಶಕಗಳಿಂದ ಸಾಹಿತ್ಯ, ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಅದು ಅವರ ಉತ್ತಮ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದ್ದು, ಗೆಳೆಯರ ಬಳಗದ ಪ್ರಥಮ ಪ್ರಶಸ್ತಿ ತಾಲ್ಲೂಕಿಗೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರಾಗಿದ್ದುಕೊಂಡು, ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ನೀಡುತ್ತಿರುವ ಎಸ್.ಆರ್.ಧರ್ಮೇಶ್ ಹೆಸರಲ್ಲಿ, ಅವರ ಗೆಳೆಯರು ಪ್ರಶಸ್ತಿ ಸ್ಥಾಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ಅದನ್ನು ಅರ್ಹ ವ್ಯಕ್ತಿಗೆ ನೀಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಬದುಕು, ಬರಹ ಕುರಿತು ಮಾತನಾಡಿದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ದಾಸಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ, ಧರ್ಮೇಶ್ ಗೆಳೆಯರ ಬಳಗದ ಅಧ್ಯಕ್ಷ ಎಸ್.ಆರ್.ಧರ್ಮೇಶ್, ಕಾರ್ಯದರ್ಶಿ ವಿ.ರಾಮಪ್ಪ ಪ್ರಶಸ್ತಿ ಪುರಸ್ಕøತರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಪತ್ನಿ ಬಿ.ವಿ.ಸುಗುಣ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ರೂ.40 ಸಾವಿರ ನಗದು ಒಳಗೊಂಡ, ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.
ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ರಾಮಕೃಷ್ಣೇಗೌಡ, ಸಿಆರ್‍ಪಿ ನಟರಾಜ್, ಉಪನ್ಯಾಸಕರಾದ ಸೀತರೆಡ್ಡಿ, ನಾರಾಯಣಸ್ವಾಮಿ, ಪ್ರಾಂಶುಪಾಲ ಸೀನಪ್ಪ, ಡಾ.ಶಿವಕುಮಾರ್, ವಿಶ್ವನಾಥಸಿಂಗ್, ನಾಗೇಂದ್ರ, ನಿಶಾಂತ್ ಇದ್ದರು.