ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಾಹಿತ್ಯಕ್ಕೆ ಎಲ್ಲೆಗಳ ಹಂಗಿಲ್ಲ. ಸಾಹಿತ್ಯ ಸಾಮಾಜಿಕ ಬದಲಾವಣೆಯ ವಾಹಕ ಎಂದು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನದ ಸಂಶೋಧಕ ಹಾಗೂ ಸಾಹಿತಿ ಡಾ. ಕುಪ್ಪನಹಳ್ಳಿ ಎಂ.ಬೈರಪ್ಪ ಹೇಳಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕವಿ ಬಿ.ವಿ.ವೆಂಕಟೇಶ್ ಅವರ ತಾಯಿಯ ಋಣ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಕವಿಗಳು, ರೈತ ಸಮುದಾಯದ ಬದುಕು, ಬವಣೆ ಕುರಿತು ಬರೆಯಬೇಕು. ಬರಹದಲ್ಲಿ ಗ್ರಾಮೀಣ ಕಲೆ ಹಾಗೂ ಸಂಸ್ಕøತಿ ಬಿಂಬಿಸಬೇಕು ಎಂದು ಹೇಳಿದರು.
ಕವಿ ನಂಬಿಹಳ್ಳಿ ಬಿ.ವಿ.ವೆಂಕಟೇಶ್ ತಮ್ಮ ಕವನ ಸಂಕಲನದಲ್ಲಿ ತಾಯಿ ಪ್ರೀತಿಯನ್ನು ಆತ್ಮೀಯವಾಗಿ ಬಿಂಬಿಸಿದ್ದಾರೆ. ತಾಯಿಯ ಋಣ ತೀರಿಸಬೇಕಾದ ಅಗತ್ಯ ಕುರಿತು ಮನ ಮುಟ್ಟುವಂತೆ ಬರೆದಿದ್ದಾರೆ. ಇಂಥ ಸಾಮಾಜಿಕ ಹಾಗೂ ಕೌಟುಂಬಿಕ ಕಾಳಜಿಯುಳ್ಳ ಸಾಹಿತ್ಯ ಬರಬೇಕು. ಅದು ಯುವ ಜನರ ಮನಸ್ಸು ಬದಲಿಸಬೇಕು. ಹಿರಿಯರ ಬಗ್ಗೆ ಗೌರವ ಮೂಡಿಸಬೇಕು ಎಂದು ಹೇಳಿದರು.
ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಗಡಿ ಭಾಗದಲ್ಲಿರುವ ಕೋಲಾರ ಜಿಲ್ಲೆ ಉತ್ತಮ ಸಾಹಿತಿಗಳನ್ನು ನೀಡಿದೆ. ಇಲ್ಲಿನ ಅನ್ಯ ಭಾಷಿಕರು ತಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವಕ್ಕೆ ಮೀಸಲಾಗಬಾರದು. ಅದು ನಿತ್ಯ ಬಳಕೆಯ ಸಾಧನವಾಗಬೇಕು. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಕನ್ನಡದಲ್ಲಿ ಮಾತನಾಡುವುದರ ಮೂಲಕ ಭಾಷಾಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಆರ್.ರವಿಕುಮಾರ್, ಟಿ.ವಿ.ಶಿವಣ್ಣ, ಜೆ.ಗೋಪಿನಾಥ್, ಎನ್.ವಿ.ವೇಣುಗೋಪಾಲ್, ಕವಿ ಬಿ.ವಿ.ವೆಂಕಟೇಶ್, ಬೈರಾರೆಡ್ಡಿ, ಎಸ್.ಶಿವಮೂರ್ತಿ, ಪಿ.ಎಂ.ಮಂಜುನಾಥ್, ಕವಿ ರಾಧಾಕೃಷ್ಣ, ಟಿ.ರಮೇಶ್, ಬಿ.ಎಂ.ಶ್ರೀನಿವಾಸ್, ನಾರಾಯಣಸ್ವಾಮಿ ಇದ್ದರು