ಭಾರತೀಯ ಪರಂಪರೆಯಲ್ಲಿ ಸಂತೆ ಇಂದಿಗೂ ಪ್ರಸ್ತುತ
ಶ್ರೀನಿವಾಸಪುರ: ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಸಂತೆ ಹಾಸುಹೊಕ್ಕಾಗಿದೆ. ವಾರದ ಸಂತೆಯಲ್ಲಿ ಗ್ರಾಮೀಣ ಹುಟ್ಟುವಳಿಗಳನ್ನು ಮಾರಾಟ ಮಾಡುವ ಪ್ರಾಚೀನ ಆರ್ಥಿಕ ವ್ಯವಸ್ಥೆ ಇಂದಿಗೂ ಮುಂದುವರಿದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾಣಿಜ್ಯ ಉತ್ಸವ ಹಾಗೂ ಕಾಲೇಜು ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಜಾನಪದ ಹಾಗೂ ಸಾಹಿತ್ಯ ಚರಿತ್ರೆಯಲ್ಲಿ ಸಂತೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಂತೆಗೆ ಸಂಬಂಧಿಸಿದ ಜಾನಪದ ಕತೆ, ವಚನ, ಗಾದೆ ಹಾಗೂ ಪದಗಳು ತಲೆಮಾರಿನಿಂದ ತಲೆಮಾರಿಗೆ ಸಾಗಿಬರುತ್ತಿವೆ ಎಂದು ಹೇಳಿದರು.
ಸಂತೆ ಮತ್ತಿತರ ಆರ್ಥಿಕ ಕ್ಷೇತ್ರಗಳು ಆರ್ಥಿಕ ವ್ಯವಹಾರ ಜ್ಞಾನ ಬೆಳೆಸುತ್ತವೆ. ಸಂತೆ ವಹಿವಾಟು ಎಲ್ಲ ವಯೋಮಾನದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಬೆಳೆಸಿಕೊಳ್ಳಲು ಸಂತೆಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕ ವ್ಯವಸ್ಥೆ ಬಲಗೊಳ್ಳಲು ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಉತ್ತಮ ಸಂಬಂಧ ಇರಬೇಕು. ವಿದ್ಯಾರ್ಥಿ ಸಮೂಹದಲ್ಲಿ ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದ ಜ್ಞಾನ ಬೆಳೆಸುವ ಉದ್ದೇಶದಿಂದ ವಾಣಿಜ್ಯ ಉತ್ಸವ ಏರ್ಪಡಿಸಲಾಗಿದೆ. ಅವರೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅವರಲ್ಲಿ ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಮುಖ್ಯಸ್ಥೆ ಶಾರದ, ವಾಣಿಜ್ಯ ವ್ಯವಹಾರದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರ ಸಂಬಂಧ ಕುರಿತು ಮಾತನಾಡಿದರು. ಸ್ಥಳೀಯ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಎಸ್ಆರ್.ಶ್ರೀನಾಥ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾಲೇಜು ಸಂತೆಯಲ್ಲಿ ವಿದ್ಯಾರ್ಥಿನಿಯರು ತಮ್ಮದೇ ಆದ ಅಂಗಡಿಗಳನ್ನು ತೆರೆದು, ಹಣ್ಣು, ತರಕಾರಿ, ತಿಂಡಿ ತಿನಿಸು ಮಾರಾಟ ಮಾಡಿದರು. ಸಾಹಿತಿ ಎನ್.ಶಂಕರೇಗೌಡ ಅವರ ನೇತೃತ್ವದಲ್ಲಿ ಪುಸ್ತಕ ಮಾರಾಟ ಮಳಿಗೆ ತೆರೆದಿದ್ದುದು ವಿಶೇಷವಾಗಿತ್ತು. ವಿದ್ಯಾರ್ಥಿನಿಯರು ತಮಗೆ ಇಷ್ಟವಾದ ತಿಂಡಿ ಖರೀದಿಸಿ ಸವಿಯುವುದರೊಂದಿಗೆ, ಪುಸ್ತಕಗಳನ್ನು ಖರೀದಿಸಿ ಖುಷಿಪಟ್ಟರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಆರ್.ಮಾಧವಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಆರ್.ಶ್ರೀಧರ್, ಗಂಗೋತ್ರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಲ್.ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕರಾದ ಎನ್.ವಾಸು, ಎನ್.ಶಂಕರೇಗೌಡ, ಜೆ.ಗೋಪಿನಾಥ್, ಜಿ.ಕೆ.ನಾರಾಯಣಸ್ವಾಮಿ, ವೇಣುಗೋಪಾಲ್, ಫಿಯಾಜ್ ಅಹ್ಮದ್, ರಘುಪತಿ, ಶಿವಾರೆಡ್ಡಿ, ಮಲ್ಲಿಕಾರ್ಜುನ, ಬಾಲಕೃಷ್ಣ, ಉಪನ್ಯಾಸಕಿಯರಾದ ಬಿ.ಎನ್.ವೀಣಾ, ಸುಮಾ, ಗಾಯಕಿ ನವ್ಯಶ್ರೀ ಸಮಾರಂಭದಲ್ಲಿ ಉಪಸ್ಥಿತರಿದ್ದರು.