ಕಟಪಾಡಿ : ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಉದ್ಯಾವರದ ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಲಾರೆನ್ಸ್ ಡೇಸ ಮಾತನಾಡಿ, ಶಿಕ್ಷಕರ ದಿನಾಚರಣೆಯ ಮೂಲಕ ಶಿಕ್ಷಕರನ್ನು ಅಭಿನಂದಿಸುವುದು ಅತ್ಯಂತ ಶ್ರೇಷ್ಠ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳನ್ನು ತಿದ್ದಿ ಬೆಳೆಸಿದ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ದಾರಿದೀಪ. ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದ್ದು. ಸರಕಾರಿ ಶಾಲೆಗಳಲ್ಲಿ ಹಲವು ಸವಾಲುಗಳಿದ್ದರೂ, ಶಿಕ್ಷಕರು ಆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಫಲಿತಾಂಶ ಬರಲು ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದರು.
ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಸಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಒಟ್ಟು 29 ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಭಿನಂದಿಸಿ, ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಪ್ರಮುಖರಾದ ಹರಿಶ್ಚಂದ್ರ, ಸಂತೋಷ ಸುವರ್ಣ ಬೊಳ್ಜೆ, ವಿಜಯ್ ಕುಮಾರ್ ಉದ್ಯಾವರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್, ಪ್ರೌಢಶಾಲೆ ಮುಖ್ಯೋಪಾಧ್ಯೆ ಮುಖಾಂಬೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಕೋಶಾಧಿಕಾರಿ ಲ. ಅನಿಲ್ ಮಿನೇಜಸ್, ಕಾರ್ಯಕ್ರಮದ ನಿರ್ದೇಶಕರಾದ ಲ. ವಿವಿಯನ್ ಪಿರೇರಾ, ಲ. ಜೋನ್ ಗೋಮ್ಸ್ ಉಪಸ್ಥಿತರಿದ್ದರು.
ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರೆ, ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರಾ ಧನ್ಯವಾದ ಸಮರ್ಪಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.