ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ :- ರೈತರು,ಮಹಿಳೆಯರಿಗೆ ಬದುಕು ನೀಡುತ್ತಿರುವ ಡಿಸಿಸಿ ಬ್ಯಾಂಕ್ ವಿರುದ್ದ ಯಾರು ಎಷ್ಟೇ ಆರೋಪ ಮಾಡಿದರೂ ಡಿ.ಸಿ.ಸಿ. ಬ್ಯಾಂಕ್ ರಥ ಇದ್ದಂಗೆ ಅದರ ಉತ್ಸವ ಮೂರ್ತಿಗಳಾದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರುಗಳು ಮತ್ತು ರೈತರು ನಿರಂತರವಾಗಿ ಪ್ರತಿವರ್ಷ ರಥೋತ್ಸವವನ್ನು ಮುಂದುವರೆಸಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿವಿಮಾತು ಹೇಳಿದರು.
ಪಟ್ಟಣದ ಬಾಲಕೀಯರ ಕಾಲೇಜು ಆವರಣದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಮತ್ತು ಶೂನ್ಯ ಬಡ್ಡಿಯಲ್ಲಿ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕಿಗೆ ಹತ್ತು ವರ್ಷಗಳ ಕಾಲ ಬಾಗಿಲಿಗೆ ಮುಳ್ಳು ಹಾಕಿದಾಗ ಅದರ ಬಗ್ಗೆ ಕಿಂಚಿತ್ತು ಯೋಚನೆ ಮಾಡದವರು ವಿನಾ ಕಾರಣ ಅದರ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಸಾಲ ಮರುಪಾವತಿ ಮಾಡಿದ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಹೊಸ ಸಾಲ ನೀಡಲು ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ ಅವರು, ಸೋಮಯಾಜಲಪಲ್ಲಿ, ಗೌನಿಪಲ್ಲಿ, ರಾಯಲ್ಪಾಡು, ಯಲ್ದೂರು ಸೋಸೈಟಿಗಳ ವ್ಯಾಪ್ತಿಗೆ ಬರುವ 175 ಸಂಘಗಳ 1700 ಕುಟುಂಬಗಳಿಗೆ ಮತ್ತು ಶೂನ್ಯ ಬಡ್ಡಿಯಲ್ಲಿ ರೈತರಿಗೆ 1300 ಕುಟುಂಬಗಳಿಗೆ 22 ಕೋಟಿ ರೂಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ರಜೆ ಇರುವ ಕಾರಣ ಎ.ಟಿ.ಎಂ. ಮೂಲಕ ಹಣ ಪಡೆದುಕೊಳ್ಳಬಹುದು ದೀಪಾವಳಿ ಹಬ್ಬದ ದಿವಸ ಸಂತೋಷವಾಗಿ ಎಲ್ಲರೂ ಹಬ್ಬವನ್ನು ಆಚರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಸಾಲವನ್ನು ನೀಡಲಾಗುತ್ತಿದೆ ಎಂದರು.
ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಟೀಕೆ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ. ಈ ತಾಲೂಕಿನಲ್ಲಿ ಪ್ರಾಜೆಕ್ಟ್ ಯೋಜನೆಯಲ್ಲಿ 18ಸಾವಿರ ಮನೆಗಳನ್ನು ಹಾಗೂ ಶೂನ್ಯ ಬಡ್ಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆ ಯೋಜನೆ ಜಾರಿಗೆ ತಂದಾಗ ಟೀಕೆ ಮಾಡಿದರು. 25 ಸಾವಿರದಿಂದ 50 ಸಾವಿರದವರೆಗೆ ಏರಿಕೆ ಮಾಡಲಾಯಿತು. ಇದು ಮುಂದಿನ ದಿನಗಳಲ್ಲಿ 1 ಲಕ್ಷಕ್ಕೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಸ್ತ್ರೀ ಶಕ್ತಿ ಸಂಘಗಳವರಿಗೆ 1 ರಿಂದ 1.50 ಲಕ್ಷ ರೂಗಳ ಹಾಗೂ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಈಗ ನೀಡುತ್ತಿರುವ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡೇ ತೀರುತ್ತೇನೆ ಎಂಬ ಆಶ್ವಾಸನೆ ನೀಡಿದರು.
ಗೌನಿಪಲ್ಲಿ ಸೋಸೈಟಿಯಲ್ಲಿ 4 ಕೋಟಿ ಭ್ರಷ್ಟಚಾರ ನಡೆದಿದೆ ಎಂದು ಈ ತಾಲೂಕಿನ ಮಹಾನುಭವರೊಬ್ಬರು ಹೇಳಿದ್ದಾರೆ. ಸಾಲ ಕೊಟ್ಟಿರುವುದೆ 2.70ಕೋಟಿ ಆದರೆ 4 ಕೋಟಿ ಎಲ್ಲಿಂದ ಬಂದಿತು. ಶಾಲೆಯಲ್ಲಿ ಪಾಠ ಕಲಿಯದೆ ಇದ್ದವರು ಹಾಗೂ ಗಣಿತ ಗೊತ್ತಿಲ್ಲದವರು ಹೇಳಿದಂತಾಗುತ್ತದೆ. ಎಲ್ಲಿ ಭ್ರಷ್ಟಚಾರ ನಡೆದಿದೆ ಯಾವ ಸೋಸೈಟಿಯಲ್ಲಿ ನಡೆದಿದೆ ಯಾರಿಗೆ ಸಾಲ ನೀಡಿಲ್ಲ ಎಲ್ಲಿ ಪಕ್ಷಪಾತ ನಡೆದಿದೆ ಎಂಬುದು ನಿಖರವಾಗಿ ತಿಳಿಸಲಿ. ಭ್ರಷ್ಟಚಾರ ನಡೆದಿದ್ದರೆ ಅವರನ್ನು ಜೈಲಿಗೆ ಕಳುಹಿಸೋಣ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವರಿಗೆ ತಿರುಗೇಟು ನೀಡಿದರು.
ಬಡವರು ಬಡವರಾಗಿಯೇ ಉಳಿಯಲಿ ಎಂಬುದು ಕೆಲವರ ಆಶಯವಾಗಿದೆ. ಬಡವರಿಗೆ ಸಾಲ ನೀಡುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಬ್ಯಾಂಕನ್ನು ಮುಚ್ಚಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಇದನ್ನು ಯಾರು ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ಕಣ್ಣೀರಿಟ್ಟ ಶಾಸಕ ರಮೇಶ್‍ಕುಮಾರ್
ಒಂದು ವಾರದ ಹಿಂದೆ ಕಾರ್ಯಕ್ರಮ ನಡೆಯಬೇಕಾಗಿತ್ತು ನನ್ನ ಪತ್ನಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಡವಾಯಿತು. ಸಾರ್ವಜನಿಕ ಜೀವನದಲ್ಲಿ ಎಂದು ಕಾಣಿಸಿಕೊಂಡವಳಲ್ಲ. ಶಸ್ತ್ರ ಚಿಕಿತ್ಸೆಗೆ ಹೋಗುವ ಮುನ್ನ ನನ್ನ ಕೈ ಹಿಡಿದು ಹತ್ತು ಜನಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ ಭ್ರಷ್ಠಾಚಾರಕ್ಕೆ ಸಹಾಯ ಮಾಡಬೇಡಿ. ಭ್ರಷ್ಟಚಾರದ ಆರೋಪಕ್ಕೆ ಸಿಲುಕಬೇಡಿ ಎಂದು ಸಲಹೆ ಮಾಡಿದ ವಿಷಯವನ್ನು ತಿಳಿಸುತ್ತಾ ಗದ್ಗರಿತರಾದರು.
ಬ್ಯಾಂಕ್ ವಿರುದ್ದ ಟೀಕೆಗೆ ಮಹಿಳೆಯರಿಂದ ಉತ್ತರ
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ಡಿ.ಸಿ.ಸಿ. ಬ್ಯಾಂಕ್ ವಿಚಾರವಾಗಿ ನನ್ನ ಬಗ್ಗೆ ನೂರು ಬಾರಿ ಮಾತನಾಡಲಿ ನನಗೆ ಬೇಜಾರಿಲ್ಲ ವಿನಾಃ ಕಾರಣ ಪ್ರತಿದಿನ ನನ್ನ ವಿರುದ್ದ ಟೀಕೆ ಮಾಡುತ್ತಿದ್ದಾರೆ. ನಾನು ಮಾಡುತ್ತಿರುವ ತಪ್ಪೇನು ಎಂಬುದರ ಬಗ್ಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರೆ ಉತ್ತರ ನೀಡಲಿ ಎಂದರು.
ಇಡಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಎ.ಟಿ.ಎಂ. ಕಾರ್ಡ್ ನೀಡಿರುವುದು ಕೋಲಾರ ಡಿಸಿಸಿ ಬ್ಯಾಂಕಿನಲ್ಲಿ ಮಾತ್ರ. ನಿಮ್ಮ ಸಾಲದ ಹಣವನ್ನು ನಿಮ್ಮ ಖಾತೆಗೆ ಹಾಕುತ್ತಿದ್ದರೂ ನಾನು ಭ್ರಷ್ಟ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಆರೋಪ ಮಾಡುವವರಲ್ಲಿ ವಿನಂತಿ ಮಾಡುವುದೆನೆಂದರೆ ಅವರು ದೊಡ್ಡವರು. ನನ್ನಲ್ಲಿ ಭ್ರಷ್ಟಚಾರದ ಸೋಂಕು ಇದ್ದರೆ ಸಾಲಕ್ಕಾಗಿ ನಾನು ಯಾರ ಬಳಿಯಾದರೂ 100 ರೂ ಲಂಚ ಪಡೆದಿರುವುದು ಸಾಭೀತುಪಡಿಸಿದರೆ ಅಧ್ಯಕ್ಷರ ಸ್ಥಾನದಲ್ಲಿ ಒಂದು ದಿನವೂ ಉಳಿಯುವುದಿಲ್ಲ ಎಂದು ಸವಾಲು ಹಾಕಿದರು.
ಈ ಬ್ಯಾಂಕಿನ ನಾಗಿರೆಡ್ಡಿ ಎಂಬುವವರ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವವರ ಜಾಗದಲ್ಲಿ ನಾನು ಕುಳಿತಿದ್ದೇನೆ. ಆ ಸ್ಥಾನದಲ್ಲಿ ಭ್ರಷ್ಟಾಚಾರ ಮಾಡಿ ಕುಳಿತುಕೊಳ್ಳಲು ಸಿದ್ದವಿಲ್ಲ. ಸಹಕಾರ ವ್ಯವಸ್ಥೆ ಬಡವರ ವ್ಯವಸ್ಥೆ ಬಡವರ ಕಷ್ಟ ನನಗೆ ಅರ್ಥವಾಗುತ್ತದೆ. ಬಡವರಿಗೆ ಈ ಬ್ಯಾಂಕಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿವೆ ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೆಸರು ಹೇಳದೆ ನಿಮ್ಮ ಹಿಂಬಾಲಕರಿಗೆ ಮತ್ತು ನಿಮ್ಮ ಮುಖಂಡರು ನನ್ನ ಜೊತೆಯಲ್ಲಿದ್ದಾರೆ ಅವರೆಲ್ಲರೂ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ. ಹೆಸರು ಸಹಿತ ಬೇಕಾದರೂ ಹೇಳುತ್ತೇನೆ. ರಮೇಶ್ ಕುಮಾರ್ ರವರು ಸಾಲ ನೀಡುವಾಗ ಪಕ್ಷಪಾತ, ಜಾತಿ ನೋಡದೆ ಸಾಲ ನೀಡಿ ಎಂದು ನೂರು ಬಾರಿ ಹೇಳಿದ್ದಾರೆ ಎಂದರು.
ಹೆಣ್ಣು ಮಕ್ಕಳ ಮತ್ತು ರೈತರ ಬಗ್ಗೆ ಗೌರವ ಇದ್ದರೆ ಅವಶ್ಯಕತೆ ಇರುವ ಕಡೆ ಸಾಲ ನೀಡಿಲ್ಲ ಎಂದು ಹೇಳಲಿ ಗೌರವದಿಂದ ನಾನು ನಡೆದುಕೊಳ್ಳುತ್ತೇನೆ. ನನಗೆ ಮುಜುಗರ ಮತ್ತು ಬೇಸರ ಇಲ್ಲ. ಗೌನಿಪಲ್ಲಿ ಸೋಸೈಟಿಯಲ್ಲಿ ಸಾಲ ನೀಡಿರುವುದು 2.70 ಕೋಟಿ ಮನ್ನಾ ಆಗಿರುವುದು 1.70 ಕೋಟಿ ಲೆಕ್ಕಪತ್ರಗಳ ಸಮೇತ ಮಾಜಿ ಶಾಸಕರಿಗೆ ನೀಡಿ ಎಂದು ಸಿಬ್ಬಂಧಿಗೆ ತಿಳಿಸಿದ್ದೇನೆ.
ಈ ಶಕ್ತಿ ಯೋಜನೆಯಲ್ಲಿ ಯಾವ ಸ್ತ್ರೀ ಶಕ್ತಿ ಸಂಘ ಸೇರಿದಯೋ ಅವರಿಗೆ ಮುಂದಿನ ದಿನಗಳಲ್ಲಿ 1 ಲಕ್ಷ ರೂಗಳ ಸಾಲ ಪ್ರತಿ ಸದಸ್ಯರಿಗೆ ದೊರೆಯಲಿದೆ. ಸಹಕಾರಿ ವ್ಯವಸ್ಥೆಗೆ ಧಕ್ಕೆ ಮಾಡುವುದು ಒಂದೇ ತಾಯಿಗೆ ದ್ರೋಹ ಮಾಡುವುದು ಒಂದೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಬ್ಯಾಂಕ್ ವಿರುದ್ದ ಮಾತನಾಡುವವರಿಗೆ ಮಹಿಳೆಯರು ಸಾಲ ಪಡೆದು ಮರುಪಾವತಿ ಮಾಡುತ್ತಿರುವುದೆ ಉತ್ತರ. ಎರಡು ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳು 400 ಕೋಟಿ ಹೂಡಿಕೆ ಹಣ ಇಟ್ಟಿದ್ದಾರೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ವೆಂಕಟರೆಡ್ಡಿ, ಎಸ್.ವಿ. ಸುಧಾಕರ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಂಜುನಾಥರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜಯ್‍ರೆಡ್ಡಿ, ಅಕ್ಬರ್ ಷರೀಪ್, ಬಿ.ಜಿ. ಸೈಯ್ಯದ್ ಖಾದರ್, ಕೃಷ್ಣಾರೆಡ್ಡಿ, ಕೆ.ಕೆ. ಮಂಜು, ಅನೀಸ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.