ಶ್ರೀನಿವಾಸಪುರ: ಎಲ್ಐಸಿ ಪ್ರತಿನಿಧಿಗಳು ಜನರ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಪಾಲಿಸಿ ಮಾಡಿಸಬೇಕು. ಅದಕ್ಕೆ ಪೂರಕವಾಗಿ ಭಾರತೀಯ ಜೀವ ವಿಮಾ ನಿಗಮ ಹೊಸದಾಗಿ ಪರಿಚಯಿಸಿರುವ ಪಾಲಿಸಿಗಳ ಪರಿಚಯ ಮಾಡಿಕೊಡಬೇಕು ಎಂದು ತಾಲ್ಲೂಕು ಎಲ್ಐಸಿ ಉಪ ಶಾಖಾ ಕಚೇರಿ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿಧಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಪಾಲಿಸಿ ಪಡೆದವರಿಗೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.
ಎಷ್ಟೋ ಪಾಲಿಸಿದಾರರಿಗೆ ಎಲ್ಐಸಿ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಪ್ರತಿ ಪಾಲಿಸಿದಾರನಿಗೆ ಅರಿವು ಮೂಡಿಸುವ ಜವಾಬ್ದಾರಿ ಪ್ರತಿನಿಧಿಗಳದಾಗಿದೆ ಎಂದು ಹೇಳಿದರು.
ಪ್ರತಿನಿಧಿಗಳು ನಗರ ಹಾಗೂ ಪಟ್ಟಣಗಳನ್ನು ಮಾತ್ರ ಕೇಂದ್ರೀಕರಿಸದೆ, ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಪಾಲಿಸಿ ಮಾಡಿಸಬೇಕು. ಹಾಗೆ ಮಾಡುವುದರಿಂದ ಬಡವರು ಹಾಗೂ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ನಿಗಮದ ಉದ್ದೇಶವೂ ಈಡೇರುತ್ತದೆ ಎಂದು ಹೇಳಿದರು.
ಎಲ್ಐಸಿ ಅಧಿಕಾರಿ ಡಿ.ರವಿಶಂಕರ್, ಎಲ್ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಇದ್ದರು.