ಕೋಲಾರ,ಜು.26: ಜನರಿಗೆ ಜಾಗೃತಿ ಮೂಡಿಸಲು, ಸರಿಯಾದ ಮಾಹಿತಿ ತಲುಪಿಸಲು ಮಾಧ್ಯಮ ಬೇಕು. ಸಮಾಜದಲ್ಲಿನ ತಪ್ಪುಗಳನ್ನು ಹೊರತರಲು ಜೊತೆಯಾಗಿ ಕೆಲಸ ಮಾಡೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶುಕ್ರವಾರ ಆಯೋಜಿಸಿದ್ದ ಸಂವಾದ ಮತ್ತು ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ ಕುರಿತು ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆಗೆ ತಿಳಿವಳಿಕೆ ಮೂಡಿಸುವುದು. 15 ದಿನಕ್ಕೊಮ್ಮೆ ಆರಕ್ಷಕರ ದಿನ ಆಚರಣೆ. ಮಾದಕ ವಸ್ತುಗಳ ಬಗ್ಗೆ ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಪ್ರಕರಣ ದಾಖಲಾದರೆ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ಪ್ರಾಥಮಿಕ ಶಾಲಾ ಮಕ್ಕಳನ್ನು ಠಾಣೆಗೆ ಕರೆಯಿಸಿ “ತೆರೆದ ಮನೆ” ಕಾರ್ಯಕ್ರಮ ನಡೆಸುವ ಮೂಲಕ ಅರಿವು ಮೂಡಿಸಲಾಗುವುದು ಎಂದರು.
ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಸಂಬಂಧ ಸಮನ್ವಯ ಸಾಧಿಸಬೇಕು. ಈ ಸಂಬಂಧ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಈಗಾಗಲೇ ಎರಡು ಸಭೆ ನಡೆದಿದೆ. ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗೆ ಧೈರ್ಯ ತುಂಬುವುದು ನಮ್ಮ ಆದ್ಯತೆ. ದೂರು ಕೊಡಲು ಬರುವವರ ಮಾತು ಆಲಿಸಬೇಕು ನಂತರ ಕ್ರಮ ವಹಿಸಬೇಕೆಂದು ಹೇಳಿದರು.
ಬಿ.ಎನ್.ಎಸ್ ಬಗ್ಗೆ ಗೊತ್ತಿರಬೇಕು. ದೇಶದ ಯಾವುದೇ ಭಾಗದಲ್ಲಿ ಘಟನೆ ನಡೆದರೂ ಬೇರೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಆದರೆ, ತನಿಖೆ ಮಾತ್ರ ಅದೇ ಠಾಣೆಯಲ್ಲಿ ನಡೆಯುತ್ತದೆ. ಆನ್ ಲೈನ್ ಮೂಲಕ ದೂರು ದಾಖಲಿಸಬಹುದು. ಆದರೆ, ಠಾಣೆಗೆ ಬಂದು ಇ ಸಿಗ್ನೇಚರ್ ಮಾಡಿದ ಮೇಲೆ ಎಫ್.ಐ.ಆರ್ ದಾಖಲಾಗುತ್ತದೆ ಎಂದು ವಿವರಿಸಿದರು.
ಏಳು ವರ್ಷದ ಮೇಲಿನ ಪ್ರಕರಣಗಳಲ್ಲಿ ವಿಡಿಯೊ ರೆಕಾರ್ಡ್ ಮಾಡಬಹುದು. ಹೀನಿಯಸ್ ಅಪರಾಧ ವಿಡಿಯೊ ರೆಕಾರ್ಡ್ ಮಾಡುತ್ತಿದ್ದೇವೆ. ನಮ್ಮಲ್ಲಿ ಪೈಲಟ್ ಕಾರ್ಯಕ್ರಮವಾಗಿ ಪರಿಗಣಿಸುತ್ತಿದ್ದೇವೆ.
7 ವರ್ಷದ ಕೆಳಗಿನ ಶಿಕ್ಷೆಯ ಪ್ರಮಾಣದ ಪ್ರಕರಣಗಳಿಗೆ ಬಂಧನ ಮಾಡಬೇಕಾದರೆ ಡಿಎಸ್ಪಿ ಅನುಮತಿ ಬೇಕಾಗುತ್ತದೆ. ಎಫ್.ಐ.ಆರ್ ಗೆ ಮೊದಲು 15 ದಿನ ಡಿಎಸ್ಪಿ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸುವ ಅವಕಾಶವೂ ಇದೆ ಎಂದು ಹೇಳಿದರು.
ರೇಪ್ ವಿಕ್ಟಿಮ್ ಗೆ ವೈದ್ಯಕೀಯ ಪರೀಕ್ಷೆಗೆ ಸಮಯ ನಿಗಧಿಪಡಿಸಿದ್ದಾರೆ. ಮಹಿಳಾ ವೈದ್ಯರೇ ಪರೀಕ್ಷೆ ನಡೆಸಬೇಕು. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಕೊಳ್ಳಲಾಗಿದೆ. ಹಾಗೆಯೇ ಹಿರಿಯ ನಾಗರಿಕರು ಅಥವಾ ಮಹಿಳೆಯರಿಂದ ಹೇಳಿಕೆ ಪಡೆಯಲು ಅವರ ಮನೆಗೆ ಹೋಗಿ ಪಡೆಯಬಹುದು. ಹಿಂದೆ ಠಾಣೆಗೆ ಬರಬೇಕಿತ್ತು. ಭದ್ರತಾ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ ಎಂದರು. ನ್ಯಾಯಾಲಯದಲ್ಲಿ ಈ ಅಂಶಗಳನ್ನು ಪ್ರಶ್ನೆ ಮಾಡಬಹುದು.
ಬಿ.ಎನ್.ಎಸ್ನಲ್ಲಿ ಶಿಕ್ಷೆ ಸಮುದಾಯ ಸೇವೆ ಮಾಡುವ ನಿಯಮ ತರಲಾಗಿದೆ. ಇದು ನ್ಯಾಯಾಲಯ ಕೊಡುತ್ತದೆ. ಅಪರಾಧಿ ಸುಧಾರಣೆಗೆ ಈ ನಿಯಮ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪೊಲೀಸರಿಗೆ 8 ಕಾರ್ಯಾಗಾರ ನಡೆಸಲಾಗಿದೆ. ಪತ್ರಕರ್ತರಲ್ಲದವರು ಪ್ರೆಸ್ ಎಂಬ ಫಲಕ ಹಾಕಿರುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಔಷಧಿ ಅಂಗಡಿ ಹೊರತುಪಡಿಸಿ ರಾತ್ರಿ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂಬ ಆದೇಶದ ಬಗ್ಗೆ ಮಾಹಿತಿ ನೀಡಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘವು ಮಾದರಿ ಪತ್ರಕರ್ತರ ಸಂಘವಾಗಿದೆ. ಇಡೀ ರಾಜ್ಯದಲ್ಲಿ ಈ ರೀತಿಯ ಕಾರ್ಯಕ್ರಮ ಎಲ್ಲೂ ನೋಡಿಲ್ಲ. ಇಲ್ಲಿಯ ಜನರು ಪರಿಶ್ರಮಿಗಳು ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡಿ.ಸಿ, ಸಿಇಒ, ಎಸ್.ಪಿ ಆಡಳಿತ ಆಧಾರ ಸ್ತಂಭಗಳು. ಭಾರತೀಯ ನ್ಯಾಯ ಸಂಹಿತೆ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಪತ್ರಕರ್ತರು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯ ಇರಲಿ. ಪ್ರೆಸ್ ಸ್ಟಿಕರ್ ಕೊಡಿ. ದುರ್ಬಳಕೆ ಬೇಡ. ಪತ್ರಕರ್ತರಲ್ಲದ ಯಾರೋ ಯಾರೋ ಪ್ರೆಸ್ ಸ್ಟಿಕರ್ ಅಂಟಿಸಿಕೊಂಡಿರುತ್ತಾರೆ ಇದರ ಬಗ್ಗೆ ಗಮನ ವಹಿಸಬೇಕು ಎಂದರು.
ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಸೇರಿದಂತೆ ಪತ್ರಕರ್ತರು ಇದ್ದರು.