ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಾವು,ನೋವು,ಸಂಕಟದ ಸಮಯದಲ್ಲಿ ರಾಜಕಾರಣ ಮಾಡಿಕೊಂಡಿದ್ದರೆ ನಾವು ಮೃಗಗಳಿಗಿಂತ ಕಡೆಯಾಗುತ್ತೇವೆ, ಇಂದು ಜಾತಿ,ಪಕ್ಷ ಮರೆತು ಸಮಾಜವನ್ನು ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋವಿಡ್ ಸೇನಾನಿಗಳಿಗೆ ತಿಂಗಳಿಗಾಗುವಷ್ಟು ದಿನಸಿ, ಸೀರೆ, ಹರಿಸಿನ,ಕುಂಕುಮದೊಂದಿಗೆ ಮಡಿಲು ತುಂಬಿ ಅವರು ಮಾತನಾಡುತ್ತಿದ್ದರು.
ಕೋವಿಡ್ 2ನೇ ಅಲೆಯಲ್ಲಿ ಅನುಭವಿಸಿದ ನೋವು ಮರೆಯಲಾಗದು, ಅನೇಕರನ್ನು ಕಳೆದುಕೊಂಡಿದ್ದೇವೆ, ನಾನೊಬ್ಬ ಎಂಎಲ್‍ಎ ಎನಿಸಿಕೊಳ್ಳಲು ಅಸಹ್ಯಪಡುವ ಪರಿಸ್ಥಿತಿ ಎದುರಾಯಿತು. ನನಗೆ ಮತ ನೀಡಿದ ಜನ ಸಾಯುತ್ತಿದ್ದರೆ ಅವರಿಗೆ ಕನಿಷ್ಟ ಬೆಡ್,ಆಕ್ಸಿಜನ್ ಕೊಡಿಸಲಾಗದಷ್ಟು ಅಸಹಾಯಕನಾದೆ ಎಂದು ಭಾವುಕರಾಗಿ ನುಡಿದರು.
ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣ ಏಕೆ ಬೇಕು, ಜನರನ್ನು ಉಳಿಸಲು ನಾವು ಸಂಕಲ್ಪ ಮಾಡಬೇಕಾಗಿದೆ, ಸಾವಿನ ಮನೆಯಲ್ಲೂ ನಾವು ನಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ದೇವರೂ ಮೆಚ್ಚಲಾರ, ನಾವು ಮನುಷ್ಯರೂ ಆಗಲಾರೆವು ಎಂದರು.
ಕ್ಷೇತ್ರದಜನರ ಉಳಿಸಲು 3ನೇ ಅಲೆಗೆ ಸಿದ್ದತೆ
ಕೋವಿಡ್ 3 ಅಲೆ ಬರುವ ಮುನ್ಸೂಚನೆಯನ್ನು ತಜ್ಞರು ನೀಡಿರುವುದರಿಂದ ಅಂತಹ ಭೀಕರ ಸನ್ನಿವೇಶದಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಪಡಿಕೊಳ್ಳಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ನಾವು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಲ್ಯಾಬ್‍ಸಿದ್ದ 10 ಐಸಿಯು ಬೆಡ್

ಕೊರೊನ ಮೊದಲ ಹಾಗೂ ಎರಡನೆಯ ಅಲೆಯ ಹೊಡೆತಕ್ಕೆ ಜೀವನ, ಪ್ರಾಣ ಎರಡೂ ಲೆಕ್ಕಕ್ಕೆ ಸಿಗಾದಂತೆ ತತ್ತರಿಸಿ ಹೋಗಿದೆ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗವನ್ನು ಹಿಡಿತದಲ್ಲಿ ಇಡಲು ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ತಾಲೂಕಿನಲ್ಲಿ ಮಾಡಲಾಗಿದೆ ಎಂದು ಹೇಳಿದ ಅವರು, ಆಸ್ಪತ್ರೆಗಳನ್ನು ಸಿದ್ದಪಡಿಸಲಾಗಿದೆ ಎಂದರು.
ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್, 10ಹಾಸಿಗೆಯ ಐಸಿಯು, ಸಕ್ರಿಯವಾಗಿದ್ದ 4 ವೆಂಟಿಲೇಟರ್ ಜತೆಗೆ ಇನ್ನೂ 4 ವೆಂಟಿಲೇಟರ್ ಖರೀದಿಸಿದ್ದು ಜನರ ಉಪಯೋಗಕ್ಕೆ ಬಳಸಲು ಸನ್ನದ್ದಗೊಳಿಸಲಾಗಿದೆ ಎಂದರು.
ದಿನಕ್ಕೆ 584 ಲೀ ಆಮ್ಲಜನಕವನ್ನು ಉತ್ಪತ್ತಿ ಮಾಡಬಹುದಾದ ಪ್ಲಾಂಟನ್ನು ಕೆಂಪೇಗೌಡ ಏರ್ ಫೆÇೀರ್ಸ್ ಅತಾರ್ಟಿ ಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಜುಲೈ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು, ಕೊರೊನಾವನ್ನು ಕಟ್ಟಿಹಾಕುಲು ನಾವು ಸನ್ನದ್ಧರಾಗಿದ್ದೇವೆ ಎಂದು ನುಡಿದರು.
ಶ್ರೀನಿವಾಸಪುರ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಲಸಿಕೆ ನೀಡುವುದು ನನ್ನ ಗುರಿಯಾಗಿದ್ದು, ಕ್ಷೇತ್ರದ ಎಲ್ಲರಿಗೂ ಲಸಿಕೆ ಹಾಕಿಸಲು ಅರಿವು ಮೂಡಿಸಲಾಗುತ್ತಿದೆ, ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ದೇವರ ದಯೆಯಿಂದ ಕೊರೊನ ಅಬ್ಬರ ಕ್ಷೀಣಿಸುತ್ತಿದ್ದು, ಜನರು ಮತ್ತೆ ಜೀವನ ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ. ಇಂತಹ ಕ್ಷಿಪ್ರಗತಿಯಲ್ಲಿ ದುಡಿಮೆ ಇಲ್ಲದೆ, ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ರೋಗಗಳು ಬಂದರೆ ಇನ್ನು ಕಷ್ಟವಾಗುತ್ತದೆ ಎಂದರು.
ಕೊರೊನ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸಹಾಯ ಮಾಡಿದವರ ಮಧ್ಯೆ ಇದನ್ನೇ ಬಂಡವಾಳ ಮಾಡಿಕೊಂಡವರು ಇದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿ ತೆಗೆದು ಕೊಳ್ಳುವಂತೆ ಚೀಟಿ ಬರೆದು ಕೊಡಬಾರದು ಎಂದು ಅಧಿಕ ಔಷಧಿಗಳ ದಾಸ್ತಾನು ಮಾಡಲಾಗಿದೆ. ಔಷಧಿ ಚೀಟಿ ಬರೆದು ಕೊಟ್ಟ ಮಾಹಿತಿ ನನಗೆ ಗೊತ್ತಾದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಕಾರ್ಯಕರ್ತೆಯರ ಸೇವೆ ಸ್ಮರಣೀಯ
ಪ್ರತಿ ಮನುಷ್ಯರಿಗೂ ಕಾಲ ಬರುತ್ತದೆ ಎನ್ನುವುದಕ್ಕೆ ತಕ್ಕ ಉದಾಹರಣೆ ಆಶಾ ಕಾರ್ಯಕರ್ತರು, ಇವರನ್ನು ನೆನೆಯದೇ ಇದ್ದ ದಿನವೂ ಇತ್ತು. ಆದರೆ, ಈ ಪ್ರಸ್ತುತ ಕಾಲದಲ್ಲಿ ಇವರನ್ನು ನೆನಯದ ದಿನವಿಲ್ಲ. ಸರ್ಕಾರದ ಆರೋಗ್ಯ ಸೌಲಭ್ಯವನ್ನು ಜನರಿಗೆ ತಲುಪಿಸುವ ಸೇತುವೆಯಾಗಿ ಇವರು ಕೆಲಸ ಮಾಡಿದ್ದಾರೆ ಎಂದರು.
ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ, ಇವರು ಸಮುದಾಯಕ್ಕೆ ನೀಡಿರುವ ಸೇವೆ ದೇವರು ಮೆಚ್ಚುವಂತಹದು. ಆರೋಗ್ಯ, ಪೆÇಲೀಸ್, ಕಂದಾಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರಕಾರ್ಮಿಕರ ಸೇವೆಗೆ ಎಲ್ಲರೂ ಚಿರಋಣಿಯಾಗಿರಬೇಕು. ಇವರ ಸೇವೆ ಗೌರವಿಸಲು ಮಡಿಲು ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಆರ್ಥಿಕ ಪರಿಸ್ಥಿತಿ ಡೋಲಾಯಮಾನ
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋವಿಡ್ ಮಹಾಮಾರಿಯಿಂದ ಆರ್ಥಿಕ ಪರಿಸ್ಥಿತಿಯೇ ಡೋಲಾಯಮಾನವಾಗಿದೆ. ಕಂಡು ಕೇಳದ ಸಂದರ್ಭಗಳು ಜರುಗಿವೆ, ಹಿಂದಿನ ಕಾಲದ ಸಾಂಕ್ರಾಮಿಕ ರೋಗಗಳು ಶಮನವಾಗಿದೆ. ಅದೇ ರೀತಿ ಕೊರೊನ ರೋಗವು ಮಾಯವಾಗುವುದು ನಿಶ್ಚಿತ ಎಂದರು.
ಜನತೆ ಭಯಪಡುವ ಅಗತ್ಯವಿಲ್ಲ ಆದರೆ ಜಾಗ್ರತೆಯಿಂದ ನಡೆದುಕೊಳ್ಳಬೇಕು, ಕೋವಿಡ್ ಮಾರ್ಗಸೂಚಿಯಡಿ ಮಾಸ್ಕ್,ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಬೇಕು, ಜೀವ ಮತ್ತು ಜೀವನ ಎರಡೂ ಅಗತ್ಯವಿದೆ, ಈ ನಿಟ್ಟಿನಲ್ಲಿ ಜನರ ನಡೆ ಅತಿ ಮುಖ್ಯ ಎಂದರು.
ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜೀವದ ಹಂಗು ತೊರೆದು ಸಮುದಾಯದ ನಡುವೆಯೇ ಇದ್ದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಜನ ಮರೆಯಲಾರರು ಎಂದು ತಿಳಿಸಿ, ಜೀವ ರಕ್ಷಣೆಯಲ್ಲಿ ದುಡಿದ ವಾರಿಯರ್ಸ್‍ಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷಮ್ಮ, ಉಪಾಧ್ಯಕ್ಷೆ ಮುನಿರತಮ್ಮ, ತೊಟ್ಲಿ ಗ್ರಾ.ಪಂ ಅಧ್ಯಕ್ಷೆ ಆರ್.ಆಶಾ, ಉಪಾಧ್ಯಕ್ಷೆ ಸರಸ್ವತಮ್ಮ, ಸದಸ್ಯರಾದ ಭೂಪತಿ ಗೌಡ, ಶ್ಯಾಮಲಮ್ಮ, ಕೆ.ರವಿ, ಎಸ್.ಎಂ.ಮಂಜುನಾಥ್, ನಾಗೇಂದ್ರ ಶೆಟ್ಟಿ,ಪಿ.ಡಿ.ಒ.ರಮೇಶ್, ಸುಗಟೂರು ವೈದ್ಯಾಧಿಕಾರಿ ಡಾ.ಕಾವ್ಯ, ಮುಖಂಡರುಗಳಾದ ವೆಂಕಟರೆಡ್ಡಿ, ಶಶಿ, ವಿಶ್ವನಾಥ್, ರವಿ ಮುಂತಾದವರು ಉಪಸ್ಥಿತರಿದ್ದರು.