
ಕೋಲಾರ,ಜ.6: ಸಮಾಜದಲ್ಲಿ ಆಟೋ ಚಾಲಕರು ಶ್ರಮಜೀವಿಗಳು ಅವರ ಸೇವೆಯನ್ನು ಗುರ್ತಿಸುವ ಮೂಲಕ ಗೌರವಿಸುವುದು ಪ್ರತಿಯೊಬ್ಬರ ಅದ್ಯ ಜವಾಬ್ದಾರಿಯಾಗಬೇಕು ಎಂದು ಜೆ.ಡಿ.ಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಜಮೀರ್ ಪಾಷ ಅವರ ನಿವಾಸದಲ್ಲಿ ಆಟೋ ಚಾಲಕರಿಗೆ ಲೈಸನ್ಸ್ ವಿತರಿಸಿ ಮಾತನಾಡಿ, ಆಟೋ ಚಾಲಕರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಎಲ್ಲಾ ದಾಖಲೆಗಳು ಸಮರ್ಪಕವಾಗಿ ಇರಬೇಕೆಂಬ ಉದ್ದೇಶದಿಂದ ನೆಮ್ಮದಿ ಜೀವನ ನಡೆಸಲು ಅನಕೂಲವಾಗಲೆಂದು ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು.
ಈ ಬಾರಿ ಜೆ.ಡಿ.ಎಸ್.ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಲಿದ್ದಾರೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ತಾವು ನನಗೆ ಮತ ನೀಡಿ ಆಶೀರ್ವದಿಸಿದದರೆ ಕೋಲಾರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಈಗಿರುವ ಕೋಲಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಾದರಿ ಕೋಲಾರವನ್ನು ಮಾಡುವುದಾಗಿ ತಿಳಿಸಿದರು.
ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ಪಾಷ ಮಾತನಾಡಿ, ಈ ಬಾರಿ ಸ್ಥಳೀಯ ಜೆ.ಡಿ.ಎಸ್ ಅಭ್ಯರ್ಥಿಯಾದ ಸಿ.ಎಂ.ಆರ್.ಶ್ರೀನಾಥ್ ಅವರಿಗೆ ಮತ ನೀಡಿ ಅವರ ಕೈ ಬಲ ಪಡಿಸಿದರೆ ಕೋಲಾರ ಅಭಿವೃದ್ಧಿಗೆ ಮುನ್ನಡಿ ಬರೆಯಲಿದ್ದಾರೆ.
ಈಗಾಗಲೇ ಶಾಸಕರಾಗಿರುವವರು ಕೋಲಾರದ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿ ಕಡೆಗೆ ಗಮನ ನೀಡಿದ ಹಿನ್ನಲೆ ಕೋಲಾರ ಇಂದಿಗೂ ಸಹ ಚಿಕ್ಕ ಹಳ್ಳಿಯಂತಿದೆ. ಇದುವರೆಗೂ ಯಾರೂ ಸಹ ಕೋಲಾರದ ಅಭಿವೃದ್ಧಿಗೆ ಸಹಕರಿಸಲಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಜಾತಿ, ಮತ ಬೇಧಗಳನ್ನು ಮಾಡದೆ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಸ್ಥಳೀಯ ಜೆ.ಡಿ.ಎಸ್. ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಅವರನ್ನು ಬೆಂಬಲಿಸಿ ಕೋಲಾರ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಿ.ಎಂ.ಆರ್ ಶ್ರೀನಾಥ್ ಅವರು ಕೊರೋನಾ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ಬಂದ ಮನೆಗಳಿಗೆ ತೆರಳಿ ಅವರಿಗೆ ಔಷಧಿ ಕಿಟ್ಗಳನ್ನು ವಿತರಿಸಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಿದ್ದಾರೆ. ಮಳೆ ಬಂದು ಕೋಲಾರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯ ಹಸ್ತ ಚಾಚುವುದರ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಸಾಮಾನ್ಯರಂತೆ ನಮ್ಮಲ್ಲೊಬ್ಬರಾಗಿರುವ ಸಿ.ಎಂ.ಆರ್.ಶ್ರೀನಾಥ್ ಅವರನ್ನು ಗೆಲ್ಲಿಸುವ ಮೂಲಕ ಕೋಲಾರದ ಹಣೆಬರಹವನ್ನು ಬದಲಾಯಿಸೋಣ ಎಂದು ಹೇಳಿದರು.
ಸಭೆಯಲ್ಲಿ ಅಲ್ಪಸಂಖ್ಯಾತ ಮುಖಂಡರು, ಜೆ.ಡಿ.ಎಸ್.ಮುಖಂಡರು ಭಾಗವಹಿಸಿದ್ದರು.
