ಅನ್ನ ನೀಡುವ ಬ್ಯಾಂಕಿನ ಕೆಲಸಕ್ಕೆ ಬದ್ದತೆ ಇರಲಿ-ಸಿಬ್ಬಂದಿಗೆ ತಾಕೀತು ಠೇವಣಿ ಸಂಗ್ರಹಿಸಿ ನಿಷ್ಟೇ ಸಾಕ್ಷೀಕರಿಸಿ-ಬ್ಯಾಲಹಳ್ಳಿ ಗೋವಿಂದಗೌಡ ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಅನ್ನ ನೀಡುತ್ತಿರುವ ಬ್ಯಾಂಕಿನ ಕೆಲಸ ಬದ್ದತೆಯಿಂದ ಮಾಡಿ ಇಲ್ಲವಾದರೆ ಬೀದಿಗೆ ಬೀಳುತ್ತೀರಿ, ಠೇವಣಿ ಸಂಗ್ರಹಕ್ಕೆ ನಿಮಗೆ ನೀಡಿರುವ ಗುರಿ ಸಾಧನೆ ಮಾಡಿ ನಿಮ್ಮ ಕರ್ತವ್ಯ ನಿಷ್ಟೆ ಸಾಕ್ಷೀಕರಿಸಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.
ಭಾನುವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಏಳೂವರೆ ವರ್ಷಗಳ ಹಿಂದೆ ಬ್ಯಾಂಕಿನ ಸ್ಥಿತಿ ನೆನಪು ಮಾಡಿಕೊಳ್ಳಿ, ಆರೇಳು ಸಾವಿರವೂ ಸಂಬಳ ಸಿಗದೇ ಅನುಭವಿಸಿರುವ ನೋವು ಮತ್ತೆ ಇಣುಕಿ ನೋಡಬಾರದು ಎಂದರೆ ನಿಮ್ಮ ಬದ್ದತೆಯ ಕೆಲಸ ಅತಿ ಮುಖ್ಯ ಎಂದು ಎಚ್ಚರಿಸಿದರು.
ನೋವುಂಡ ದಿನಗಳ ಸ್ಮರಣೆ ಅಗತ್ಯ, ಈಗ 40-50 ಸಾವಿರ ಸಂಬಳ ಪಡೆಯುತ್ತಿದ್ದೀರಿ, ಅನ್ನ ತಿಂದ ಮನೆಗೆ ದ್ರೋಹ ಮಾಡಬಾರದು ಎಂಬುದನ್ನು ಅರಿತು ಬ್ಯಾಂಕನ್ನು ಉಳಿಸಿ ಎಂದರು.


ಪ್ರತಿ ಬ್ಯಾಂಕ್ ಶಾಖೆಗೆ 10ಕೋ.ಠೇವಣಿ ಗುರಿ


ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಡಿಸಿಸಿ ಬ್ಯಾಂಕ್ ಶಾಖೆಗೆ ತಲಾ 10 ಕೋಟಿ ರೂಗಳ ಠೇವಣಿ ಸಂಗ್ರಹದ ಗುರಿ ನೀಡಿದ್ದೇವೆ, ವೈಯಕ್ತಿಕವಾಗಿಯೂ ತಲ ಕನಿಷ್ಟ 5 ಲಕ್ಷ ಸಂಗ್ರಹಿಸಿ ಜುಲೈ ಅಂತ್ಯದೊಳಗೆ ಈ ಸಾಧನೆ ಮಾಡಿ ತೋರಿಸಿ ಎಂದು ಸೂಚನೆ ನೀಡಿದ ಅವರು ಬ್ಯಾಂಕಿನ ಕೆಲಸ ಮರೆತರೆ ನಿಮಗೆ ಅನ್ನ ಸಿಗೊಲ್ಲ ಎಂದರು
ನಾನು ಕಠಿಣವಾಗಿಯೇ ಮಾತನಾಡುತ್ತೇನೆ ಏಕೆಂದರೆ ದಿವಾಳಿಯಾಗಿದ್ದ ಬ್ಯಾಂಕನ್ನು ನಾನು ನಮ್ಮ ಆಡಳಿತ ಮಂಡಳಿ ಕಷ್ಟಪಟ್ಟು ಉಳಿಸಿ ಬೆಳೆಸಿದ್ದೇವೆ, ನಾನು ತಪ್ಪು ಮಾಡಿದ್ದರೆ ನೇರವಾಗಿ ಹೇಳಿ, ಅದು ಬಿಟ್ಟು ಕೆಲಸ ಮಾಡಲಾಗದೇ ಬ್ಯಾಂಕಿನ ವಿರುದ್ದ ಅಪಪ್ರಚಾರ ನಡೆಸದಿರಿ, ನಿಮ್ಮ ಮಕ್ಕಳಂತೆ ಬ್ಯಾಂಕನ್ನು ಪೋಷಿಸಿ ಇಲ್ಲವಾದರೆ ನಿಮ್ಮ ಕುಟುಂಬಗಳಿಗೆ ಅನ್ಯಾಯ ಮಾಡಿದಂತೆ ಎಂದು ಎಚ್ಚರಿಸಿ, ಗುರಿಸಾಧನೆಯಲ್ಲಿ ವಿಫಲರಾದವರಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.


ಕೋವಿಡ್ ಸಾವು ಪಟ್ಟಿ ಮಾಡಿಕೊಡಿ


ಅವಿಭಜಿತ ಜಿಲ್ಲೆಯಲ್ಲಿ ನಮ್ಮ ಬ್ಯಾಂಕಿನಿಂದ ಸಾಲ ಪಡೆದಿರುವ ರೈತ ಕೋವಿಡ್ ಸಾವಿಗೆ ತುತ್ತಾಗಿದ್ದರೆ ಅಂತಹವರ ಕೋವಿಡ್ ಸಾವಿನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಸಾಲ ಪಡೆದ ದಾಖಲೆಯನ್ನು ಜು.1 ರೊಳಗೆ ಬ್ಯಾಂಕಿನ ಕೇಂದ್ರ ಕಚೇರಿಗೆ ತಲುಪಿಸಿ ಇವರಿಗೆ ಪರಿಹಾರ ನೀಡಲು ಅಪೆಕ್ಸ್ ಬ್ಯಾಂಕ್ ಮುಂದೆ ಬಂದಿದೆ ಎಂದರು.
ಎರಡೂ ಜಿಲ್ಲೆಗಳಲ್ಲಿ ಸುಮಾರು 100 ಮಂದಿ ಸಾಲ ಪಡೆದಿರುವ ರೈತರ ಕೋವಿಡ್‍ಗೆ ಬಲಿಯಾಗಿರುವ ಕುರಿತು ಮಾಹಿತಿ ಇದೆ, ಶೀಘ್ರ ಮಾಹಿತಿ ಸಂಗ್ರಹಿಸಿ ಎಂದು ಸಲಹೆ ನೀಡಿದರು. ಈಗಾಗಲೇ ಎಲ್ಲಾ ಬ್ಯಾಂಕ್ ಶಾಖೆಗಳ ಆಡಿಟ್ ನಡೆಯುತ್ತಿದ್ದು, ದಾಖಲಿಸಿರುವ ಲೋಪಗಳನ್ನು ಸರಿಪಡಿಸಿಕೊಳ್ಳಿ ಎಂದರು.


ಗಣಕೀಕೃತ ಆಡಿಟ್ಶೀ ಶೀಘ್ರ ಮುಗಿಸಿ


ಇದೇ ಸಂದರ್ಭದಲ್ಲಿ ಗಣಕೀಕೃತ ಆಡಿಟ್ ಕಾರ್ಯ ವಿಳಂಬ ಮಾಡುತ್ತಿರುವ ವಿ-ಸಾಫ್ಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕನಿಷ್ಟ 12 ಪ್ಯಾಕ್ಸ್‍ಗಳಿಗೆ ಒಬ್ಬರಂತೆ ಸಿಬ್ಬಂದಿ ನೇಮಿಸಿ ಗಣಕೀಕೃತ ಆಡಿಟ್ ಜು.30ರೊಳಗೆ ಮುಗಿಸಿಕೊಡಿ ಇಲ್ಲವಾದರೆ ಸಹಿಸಲ್ಲ ಎಂದು ಎಚ್ಚರಿಸಿದರು.
ವಿವಿಧೋದ್ಧೇಶ ಸೇವಾ ಕೇಂದ್ರಗಳಡಿ ಸೊಸೈಟಿಗಳು ಗೋದಾಮು ನಿರ್ಮಾಣಕ್ಕೆ ಕೂಡಲೇ ಎಸ್ಟಿಮೇಟ್,ನಕ್ಷೆ ನೀಡಲು ತಾಕೀತು ಮಾಡಿದ ಅವರು, ಜು.1 ರಿಂದ ಎಸ್‍ಎಸ್‍ಜಿಗಳ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿ, ಯಾವುದೇ ಸಾಲ ಎನ್‍ಪಿಎ ಆಗದಂತೆ ಎಚ್ಚರವಹಿಸಿ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ದೊಡ್ಡಮುನಿ,ನಾಗೇಶ್, ಖಲೀಮುಲ್ಲಾ ಸೇರಿದಂತೆ ಎರಡೂ ಜಿಲ್ಲೆಗಳ ಬ್ಯಾಂಕ್ ಶಾಖೆಗಳ ಎಲ್ಲಾ ವ್ಯವಸ್ಥಾಪಕರು,ಸಿಬ್ಬಂದಿ ಹಾಜರಿದ್ದರು.