ಡೆಂಗ್ಯೂ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭವಾಗಲಿ-ಡಾ.ಕಮಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಡೆಂಗ್ಯೂ ಜ್ವರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು. ವಿಶೇಷವಾಗಿ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ವೃದ್ದರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಕಡ್ಡಾಯವಾಗಿ ಬಳಸಬೇಕು. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಿ, ಸೊಳ್ಳೆ ಬತ್ತಿ, ಮುಲಾಮು ದ್ರಾವಣ ಇವುಗಳನ್ನು ಉಪಯೋಗಿಸಿ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ.ಎಂ ಅವರು ತಿಳಿಸಿದ್ದಾರೆ.
ಮೇ 16, 2021 ರಂದು ರಾಷ್ಟ್ರೀಯ ಡೆಂಗೀ ದಿನಾಚರಣೆ ಪ್ರಯುಕ್ತ `ಡೆಂಗ್ಯೂ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದೊಂದಿಗೆ ಮೇ 18 ರಂದು ಮಧ್ಯಾಹ್ನ 12-00 ಗಂಟೆಗೆ ನಮ್ಮ ಧ್ವನಿ ಸಮುದಾಯ ರೇಡಿಯೋ ಕೇಂದ್ರ 90.4 ತರಂಗ ಬೂದಿಕೋಟೆ, ಬಂಗಾರಪೇಟೆ ತಾಲ್ಲೂಕು ಕೋಲಾರ ಜಿಲ್ಲೆ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
ನಮ್ಮ ರೇಡಿಯೋ ಕೇಂದ್ರದಿಂದ ನೇರ ಪೋನ್ ಇನ್ ಕಾಂiÀರ್iಕ್ರಮಗಳನ್ನು ವಿಶೇಷ ವಿಷಯದ ಕುರಿತು ನಡೆಸುವ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ತಾವು ಸಹ ಕುಳಿತು ಆಲಿಸಬಹುದು. ನೀವು ಮೊಬೈಲ್‍ನಲ್ಲಿ ಕೇಳಬಹುದು. ದೂರವಾಣಿ ಸಂ: 7026220055ಗೆ ನೀವು ಕರೆ ಮಾಡಬಹುದು.
ಡೆಂಗ್ಯೂ ಜ್ವರವು ವೈರಸ್ ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್ ಈಜಿಪ್ಟೈ ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳು ತೆಗೆದುಕೊಳ್ಳುತ್ತದೆ. 7 ದಿನಗಳ ಮೊದಲ 3 ಹಂತಗಳಾದ ಮೊಟ್ಟೆ, ಲಾರ್ವ ಮತ್ತು ಪ್ಯೂಪ ಈ ಪ್ರಕ್ರಿಯೆಯು ನಿಂತ ನೀರಿನಲ್ಲಿ ನಡೆಯುತ್ತದೆ.
ಇದರ ಲಕ್ಷಣಗಳು ಇದ್ದಕ್ಕಿದ್ದಂತೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರವಾದ ನೋವು, ಮೈಕೈ ನೋವು, ವಾಕರಿಕೆ, ಮತ್ತು ವಾಂತಿ. ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಉಚಿತ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಈಡೀಸ್ ಈಜಿಪ್ಟೈ ಸೊಳ್ಳೆಯ ಉತ್ಪತ್ತಿ ತಾಣಗಳು ಒಳಾಂಗಣ ಮತ್ತು ಹೊರಾಂಗಣದ ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ಡ್ರಂಮ್‍ಗಳು, ಬಕೆಟ್‍ಗಳು, ಬ್ಯಾರೆಲ್‍ಗಳು, ಹೂವಿನ ಕುಂಡಗಳು, ಏರ್‍ಕೂಲರ್, ಮಡಿಕೆ ಕುಡಿಕೆಗಳು, ಒರಳುಕಲ್ಲು, ಒಡೆದ ಸೀಸೆ, ತೆಂಗಿನ ಚಿಪ್ಪು, ಹೂವಿನ ಕುಂಡಗಳಲ್ಲಿ ಮಳೆ ನೀರು ಶೇಖರಣೆಯಾಗಿ ಈಡಿಸ್ ಲಾರ್ವಾ ಉತ್ಪತ್ತಿಯಾಗುತ್ತವೆ.
ನೀರು ಶೇಖರಣೆಯಾಗಿರುವ ಎಲ್ಲಾ ನೀರಿನ ತೊಟ್ಟಿ, ಡ್ರಂ, ಏರ್‍ಕೂಲರ್‍ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿಸಿ ಸ್ವಚ್ಚ ಮಾಡಿ ಮತ್ತೆ ಭರ್ತಿ ಮಾಡಿಕೊಳ್ಳುವುದು ಮತ್ತು ಮುಚ್ಚಳದಿಂದ ಮುಚ್ಚುವುದು ಹಾಗೂ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲ್‍ಗಳು, ಪ್ಲಾಸ್ಟಿಕ್ ಲೋಟಗಳು, ಒರಳು ಕಲ್ಲು ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಅತ್ಯಗತ್ಯ.
ಡೆಂಗ್ಯೂ,ಜ್ವರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸುವ ಸಲುವಾಗಿ ಡೆಂಗ್ಯೂ ಸಂಶಯಾಸ್ಪದ ಪ್ರಕರಣಗಳ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಈಡಿಸ್ ಲಾರ್ವಾ ಸಮೀಕ್ಷೆಯನ್ನು ಮಾಡಿಸಲಾಗುತ್ತಿದೆ. ಆದರೂ ಸಹ ಮಳೆಗಾಲದಲ್ಲಿ ನೀರು ಶೇಖರಣೆಯಾಗುತ್ತದೆ ಈ ಹಿನ್ನೆಲೆಯಲ್ಲಿ ವೈರಾಣು ಜ್ವರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.