ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಕುಷ್ಠರೋಗವು ಗುಣಮುಖವಾಗುವಂತಹ ಸೋಂಕು ಖಾಯಿಲೆಯಾಗಿದ್ದು , ಸಕಾಲದಲ್ಲಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ . ಕುಷ್ಠ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜನವರಿ 30 ರಿಂದ ಫೆಬ್ರವರಿ 13 ರ ವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ತಿಳಿಸಿದರು . ನಗರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ , ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಕುಷ್ಠರೋಗದ ಬಗ್ಗೆ ನಿರ್ಲಕ್ಷ್ಯರಾದರೆ ಅದು ಅಭಿವೃದ್ಧಿಗೊಳ್ಳುತ್ತ ಹೋಗಿ ಚರ್ಮಕ್ಕೆ , ನರಗಳಿಗೆ , ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡುತ್ತದೆ . ದೇಹದ ಭಾಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ . ರೋಗದ ಪರಿಣಾಮವಾಗಿ ರೋಗಗ್ರಸ್ಥರಾಗುತ್ತಾರೆ ಎಂದು ತಿಳಿಸಿದರು . ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು . ಆಶಾಕಾರ್ಯಕರ್ತೆಯರು ಕುಷ್ಠರೋಗ ಅರಿವು ಆಂದೋಲನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು . ಕುಷ್ಠರೋಗಗಳು ಎಲ್ಲೆಲ್ಲಿ ಕಂಡುಬಂದಿವೆ , ಆ ಪ್ರದೇಶಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು . ಈ ಬಗ್ಗೆ ಪರಿಶೀಲಿಸಲಾಗುವುದು . ಹೊಸ ಪ್ರಕರಣಗಳನ್ನು ಗುರುತಿಸುವ ಜೊತೆಗೆ ಇರುವ ಪ್ರಕರಣಗಳನ್ನು ಬೇಗ ಗುಣಪಡಿಸಬೇಕು ಎಂದು ತಿಳಿಸಿದರು . ಕರೋನಾಗೆ ಸಂಬಂಧಿಸಿದಂತೆ ಸಕ್ರಿಯ ಪ್ರಕರಣಗಳು ನಿನ್ನೆಗೆ 36 ಇರುವುದರಿಂದ ಎಲ್ಲಾ ಕರೋನಾ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ , ನಿಗದಿತ ಗುರಿ ಇರುವ ಟೆಸ್ಟ್‌ಗಳನ್ನು ಮಾಡಿ , ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪರೀಕ್ಷಿಸಿ ಕರೋನಾ ಲಸಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು . ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ . ಖಾಸಗಿ ಕೋವಿಡ್ ಆಸ್ಪತ್ರೆಗಳನ್ನು ಕರೋನಾ ಸೇವೆಯಿಂದ ಬಿಡುಗಡೆಗೊಳಿಸಬೇಕು . ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ಪ್ರತಿಯೊಬ್ಬ ಬಡವರಿಗೂ ವಿತರಣೆ ಮಾಡಬೇಕು ಎಂದು ತಿಳಿಸಿದರು .
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳಾದ ಡಾ | ನಾರಾಯಣಸ್ವಾಮಿ ಅವರು ಮಾತನಾಡಿ , ಪ್ರತಿ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಅರಿವು ಮೂಡಿಸುತ್ತಾರೆ . ಕುಷ್ಠರೋಗವು ಚರ್ಮ ಮತ್ತು ನರ ವ್ಯವಸ್ಥೆಗೆ ದೋಷ ಉಂಟು ಮಾಡುತ್ತದೆ . ಚರ್ಮದ ಮೇಲೆ ಬಿಳಿ ಮಚ್ಚೆಗಳಿದ್ದು , ಆ ಮಚ್ಚೆಗಳ ಜಾಗದಲ್ಲಿ ಸ್ಪರ್ಷಜ್ಞಾನವಿಲ್ಲದಿದ್ದರೆ ಕುಷ್ಠರೋಗದ ಲಕ್ಷಣವಾಗಿರುತ್ತದೆ . ಮುಖ ಮತ್ತು ಕೈಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು . ಕಣ್ಣಿನ ರೆಪ್ಪೆಗಳ ಮೇಲ್ಬಾಗ ಮುಚ್ಚಲು ಆಗದೆ ಇರುವುದು , ಕೈ ಬೆರಳುಗಳು ಸೆಟೆದು ಬಾಗಿಸಲು ಬಾರದಿರುವುದು , ಮುಖ ವಿರೂಪವಾಗುವುದು , ಮೂಗು ಚಪ್ಪಟೆಯಾಗುವುದು , ಕಾಲಿನ ಪಾದ ಮುರುಟಿಕೊಂಡು ಸ್ಪರ್ಷಜ್ಞಾನ ಕಳೆದುಕೊಳ್ಳುವುದು . ದೃಷ್ಟಿ ಮಂದವಾಗುವುದು ಕುಷ್ಠರೋಗದ ಲಕ್ಷಣವಾಗಿದೆ . ಏಪ್ರಿಲ್ 2020 ರಿಂದ 13 ಪ್ರಕರಣಗಳು ಕಂಡುಬಂದಿದೆ . ಮೈಕ್ರೋಬ್ಯಾಕ್ಟಿರಿಯಂ ಲೆಪ್ರೇ ಎಂಬ ಬ್ಯಾಕ್ಟಿರಿಯಾ ಕಾರಣ ಎಂದು ತಿಳಿಸಿದರು . ಡಾ || ವಿಜಯ್ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಕುಮಾರ್.ಎಸ್.ಎನ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ | ನಾರಾಯಣಸ್ವಾಮಿ , ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ | ವಿಜಯಕುಮಾರಿ , ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ , ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು .