ಶ್ರೀನಿವಾಸಪುರ: ಕೋಲಾರದಲ್ಲಿ ಅ.3 ರಂದು ಏರ್ಪಡಿಸಿದ್ದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ರವಿಕುಮಾರ್ ಮಾತಿನ ಭರದಲ್ಲಿ ರಮೇಶ್ ಕುಮಾರ್ ಅವರ ಜಮೀನು ಕುರಿತು ಪ್ರಸ್ತಾಪಿಸಿ ‘ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾ ಅರಣ್ಯಾಧಿಕಾರಿ ಚಕಾರ ಎತ್ತುತ್ತಿಲ್ಲ. ರಮೇಶ್ ಕುಮಾಮಾರ್ ಅವರೇನು ಸತ್ಯ ಹರಿಶ್ಚಂದ್ರನೇ ಎಂದು ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ವಿಷಯದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಟಸ್ಥ ನಿಲುವು ತಳೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡವರು ಕುಣಿಯಬೇಕು. ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಕಾಲಿಗೆ ಗೆಜ್ಜೆ ಕಟ್ಟಿದ್ದಾರೆ. ಹಾಗಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರೈತರ ಪರವಾಗಿ ಧ್ವನಿಯೆತ್ತಬೇಕು. ಆದರೆ ಅವರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಮತದಾರರು ಕುಣಿಯಲು ಭಾರದ ವ್ಯಕ್ತಿಯ ಕಾಲಿಗೆ ಗೆಜ್ಜೆ ಕಟ್ಟಿದಂತಾಗಿದೆ ಎಂದು ಹೇಳಿದರು.
ಈಗ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳು ರೈತರ ಪರವಾಗಿ ಹೋರಾಟ ಮಾಡಬೇಕು. ಆದರೆ ಇಲ್ಲಿ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತಾಗಿದೆ. ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರು, ಪಕ್ಷದ ಮುಖಂಡರೊಂದಿಗೆ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಒತ್ತುವರಿ ತೆರವುಗೊಳಿಸಲಾಗಿದ್ದ ಜಮೀನು ಉಳುಮೆ ಮಾಡಿದ ಆಪಾದನೆ ಮೇಲೆ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದ ರೈತ ನಾಗರಾಜ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು ಸರಿಯಲ್ಲ. ಏನೇ ಆದರೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸಮಸ್ಯೆ ನಿವಾರಣೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಪಕ್ಷಾತೀತವಾಗಿ ಹೋರಾಡಬೇಕು ಎಂದು ಹೇಳಿದರು.
ಮುಖಂಡರಾದ ಮುನಿವೆಂಕಟಪ್ಪ, ವೆಂಕಟರೆಡ್ಡಿ, ಗುರಪ್ಪ, ಎನ್.ತಿಮ್ಮಯ್ಯ, ಅಯ್ಯಪ್ಪ, ರಾಮಾಂಜಮ್ಮ ಇದ್ದರು.