

ಮುಳಬಾಗಿಲು; ಮಾ,31: ಏಪ್ರಿಲ್ ತಿಂಗಳಿನಿಂದ ಏರಿಕೆಯಾಗುವ ಅಗತ್ಯ ಔಷಧಿಗಳ ಬೆಲೆ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಿ ಬಡವರ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ತಾಲೂಕು ಆರೋಗ್ಯ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಕೃಷಿ ಕ್ಷೇತ್ರದ ಅವೈಜ್ಞಾನಿಕ ಕಾನೂನು ಜಾರಿಗೆ ತಂದು ದಿನೇದಿನೇ ದೇಶದ ಬಡಜನರ ಹಕ್ಕುಗಳನ್ನು ಶ್ರೀಮಂತರಿಗೆ ಮಾರಾಟ ಮಾಡುವ ಜೊತೆಯಲ್ಲಿ ಬಡವರ ಆರೋಗ್ಯವನ್ನು ಔಷಧಿ ಬೆಲೆ ಏರಿಕೆ ಮಾಡಿ ಕಸಿಯುತ್ತಿರುವ ಕೇಂದ್ರ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಕೈಬಿಡದಿದ್ದರೆ ಚುನಾವಣೆಯಲ್ಲಿ ಮತ ಕೇಳಲು ಗ್ರಾಮೀಣ ಪ್ರದೇಶಕ್ಕೆ ಬರುವ ರಾಜಕಾರಣಿಗಳ ಮುಖಕ್ಕೆ ಸಗಣಿ ಬಳಿಯುವ ಎಚ್ಚರಿಕೆಯನ್ನು ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಜನಪ್ರತಿನಿಧಿಗಳಿಗೆ ನೀಡಿದರು.
ಎರಡು ವರ್ಷ ಸಾಂಕ್ರಾಮಿಕ ರೋಗಗಳು ಮತ್ತೆರೆಡು ವರ್ಷ ಪ್ರಕೃತಿ ವಿಕೋಪಕ್ಕೆ ಸಿಲುಕಿ ಬಡ, ರೈತ, ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಿದ್ದು ಮತ್ತೆ ಬದುಕು ಕಟ್ಟಿಕೊಳ್ಳುವಾಗ ಆಳುವ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮುಖಾಂತರ ಮತ್ತೆ ಜನಸಾಮಾನ್ಯರ ಜೀವನದ ಮೇಲೆ ಗಾಯದ ಮೇಲೆ ಬರೆ ಎಳೆಯುವ ಮುಖಾಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಜೊತೆಗೆ ಜೀವನ ನಿರ್ವಹಣೆ ಕಷ್ಟಕರವಾಗಿ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿಯಲ್ಲಿರುವ ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಸರ್ಕಾರ ಶ್ರೀಮಂತರ ಐಷಾರಾಮಿ ಜೀವನಕ್ಕೆ ಬಡವರ ಬದುಕನ್ನು ಬಲಿ ಕೊಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಗತ್ಯವಾಗಿ ಬಡ, ರೈತ, ಕೂಲಿ ಕಾರ್ಮಿಕರ ಆರೋಗ್ಯಕ್ಕೆ ಬೇಕಾದಂತಹ 300ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ ಏಪ್ರಿಲ್ ತಿಂಗಳಿಂದ ಶೇ.12ರಷ್ಟು ಏರಿಕೆ ಮಾಡುತ್ತಿರುವುದು ಜನಸಾಮಾನ್ಯರನ್ನು ಯಾವುದೇ ಮದ್ದು ಗುಂಡಿಲ್ಲದೆ ನಿಧಾನವಾಗಿ ವಿಷ ನೀಡುವ ಮುಖಾಂತರ ಸರ್ಕಾರವೇ ಬಡವರನ್ನು ಹಾಳು ಮಾಡಲು ಔಷಧಿ ಧರವನ್ನು ಏರಿಕೆ ಮಾಡುವಂತಿದೆ ಎಂದು ಆರೋಪಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಭಾರತದಲ್ಲಿ ಔಷಧಿಗಳ ಬೆಲೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರವೇ (ಎನ್.ಪಿ.ಪಿ.ಎ.) ಈ ಏರಿಕೆಗೆ ಸಮ್ಮತಿಯನ್ನು ಮೊಹರನ್ನು ಒತ್ತಿದೆ. ಕೇಂದ್ರ ಸರ್ಕಾರವು ಸೂಚಿಸಿದಂತೆ ಸಗಟು ಬೆಲೆ ಸೂಚ್ಯಾಂಕದ (ಡಬ್ಲ್ಯೂ.ಪಿ.ಐ.) ವಾರ್ಷಿಕ ಬದಲಾವಣೆಯ 2022ರ ಶೇ.12.12 ರಷ್ಟು ಇದೆ ಎಂದು ಎನ್.ಪಿ.ಪಿ.ಎ. ತಿಳಿಸಿದೆ.
ಇದಕ್ಕೆ ಅನುಗುಣವಾಗಿ ನೋವು ನಿವಾರಕಗಳು, ಸೋಂಕು ನಿವಾರಕಗಳು ಹೃದಯಕ್ಕೆ ಸಂಬಂಧಿಸಿದಂತೆ ಔಷಧಿಗಳ ಆಂಟಿ ಬಯೋಟೆಕ್‍ಗಳು ಸೇರಿದಂತೆ ಅಗತ್ಯ ಔಷಧಿಗಳ ಬೆಲೆಗಳನ್ನು ಏರಿಕೆ ಮಾಡುವ ಉದ್ದೇಶವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಒಂದು ಕುಟುಂಬ ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಜೀವನ ಮಾಡಬೇಕಾದರೆ ಮನೆ ಮಂದಿಯೆಲ್ಲಾ ದುಡಿದರೂ ಸಾಲ ತೀರಿಸಲಾಗದೆ ಮಕ್ಕಳಿಗೆ ಶಿಕ್ಷಣ ನೀಡಲಾಗದ ಜೊತೆಗೆ ವಯಸ್ಸಾದ ತಂದೆತಾಯಿಗಳ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ ನೀಡಲು ಪರದಾಡುತ್ತಿರುವ ಸಮಯದಲ್ಲಿ ಸರ್ಕಾರ ಅಗತ್ಯವಾಗಿ ಬೇಕಾಗಿರುವಂತಹ ಪ್ಯಾರಾಸಿಟಿಮಲ್, ಆಂಟಿ ಬಯೋಟಿಕ್, ಅಜಿತೋಮೈಸಿನ್, ಬ್ಯಾಕ್ಟೀರಿಯಲ್, ಸೋಂಕು ನಿವಾರಕಗಳು ಸೇರಿದಂತೆ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಪ್ರಮುಖ ಔಷಧಿಗಳೇ ಬಡವರ ಕೈಗೆ ಎಟುಕದಂತೆ ಸುಮಾರು 380 ಔಷಧಿಗಳ ಬೆಲೆ ಏರಿಕೆ ಮಾಡಿದರೆ ಇನ್ನು ಔಷಧಿ ದುಬಾರಿ ವೆಚ್ಚ ನೀಡಿ ಕೊಳ್ಳಲಾಗದೆ ಇತ್ತ ಆರೋಗ್ಯವೂ ಸರಿಪಡಿಸಿಕೊಳ್ಳಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿ ಏಪ್ರಿಲ್ ತಿಂಗಳಿಂದ ಏರಿಕೆಯಾಗುವ ಔಷಧಿ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಿ ಬಡ ರೈತ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿಗಳು, ಔಷಧಿ ಬೆಲೆ ಏರಿಕೆ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲ. ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಪ್ರ.ಕಾ. ಫಾರೂಖ್‍ಪಾಷ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ವಿಜಯಪಾಲ್, ಭಾಸ್ಕರ್, ವಿಶ್ವ, ತಾಲೂಕು ಪ್ರ.ಕಾ. ರಾಜೇಶ್, ಅಂಬ್ಲಿಕಲ್ ಮಂಜುನಾಥ್, ಹೆಬ್ಬಣಿ ರಾಮಮೂರ್ತಿ, ಗುರುಮೂರ್ತಿ, ಜುಬೇರ್ ಪಾಷ, ಆದಿಲ್ ಪಾಷ ಮುಂತಾದವರಿದ್ದರು.


