ಕೋಲಾರ,ಆ.28: ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈಗಿರುವ ಕಾನೂನುಗಳ ಬಗ್ಗೆ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್ ಹೊಸಮನಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಹಕಾರ ಒಕ್ಕೂಟದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ (ಸ್ಪೆಪ್) ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಲಾಗಿದ್ದು, ಕಾನೂನು ಅರಿವು ಕಾರ್ಯಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬಾಲ್ಯವಿವಾಹಕ್ಕೆ ಕಾರಣರಾದವರು ಶಿಕ್ಷೆಗೆ ಒಳಪಡುವದರ ಜೊತೆಗೆ 2 ಲಕ್ಷ ದಂಡ ಮತ್ತು 2 ವರ್ಷ ಜೈಲು ಶಿಕ್ಷಯನ್ನು ಅನುಭವಿಸಬೇಕಾಗುತ್ತದೆ. ಪೊಕ್ಸೋ ಕಾಯ್ದೆ, ಪೋಷಕರು ಅಪ್ರಾಪ್ತ ಬಾಲಕರಿಗೆ ಬೈಕ್ಗಳನ್ನು ಕೊಟ್ಟು ಮಾಡಿಕೊಳ್ಳುವ ಎಡವಟ್ಟುಗಳಿಂದ ಆಗುವ ಪರಿಣಾಮಗಳು ಮತ್ತು ಪೋಷಕರು ಎದುರಿಸಬೇಕಾದ ಕಾನೂನು ಸಮಸ್ಯೆಗಳ ಬಗ್ಗೆ ವಿವರಿಸುತ್ತಾ ತಮಗೆ ಯಾವುದೇ ಸಮಸ್ಯೆ ಇದ್ದರೂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಎ.ಸಿ.ಶ್ರೀನಿವಾಸಗೌಡ ಮಾತನಾಡಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಬೇಕಾದರೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿಕೊಂಡು ಅದನ್ನು ಅಳವಡಿಸಿಕೊಂಡರೆ ಲಾಭದತ್ತ ಮುನ್ನಡೆಯಬಹುದು ಎಂದರು.
ಕಾರ್ಯಾಗಾರಗಳಲ್ಲಿ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರೆ ಮಾತ್ರ ಸಂಘಗಳ ಪ್ರಗತಿಗೆ ಮುನ್ನಡಿ ಬರೆಯಬಹುದು. ಚುನಾವಣೆ ನಡೆಸುವ ಬಗ್ಗೆ ತಮಗೆ ಮಾಹಿತಿ ಇದ್ದರೆ ಚುನಾವಣಾ ಸಮಯದಲ್ಲಿ ಆಗುವ ತೊಡಕುಗಳನ್ನು ನಿವಾರಿಸಿಕೊಳ್ಳಬಹುದು ಎಂದರು.
ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ಪಿ.ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕೂಟದ ಮೂಲ ಉದ್ದೇಶ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಅವರಿಗೆ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ತರಬೇತಿ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಇಲ್ಲಿ ನೀಡುವ ಇತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಂಘಗಳಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕೆಂದರು.
ಕಾರ್ಯಾಗಾರಗಳಲ್ಲಿ ತಿಳಿಸುವ ಕಾನೂನು ತಿದ್ದುಪಡಿ ಹಾಗೂ ಚುನಾವಣಾ ನಡೆಸುವ ಕುರಿತು ಅರಿತುಕೊಂಡಿದ್ದೇ ಆದಲ್ಲಿ ಸಂಘಗಳಲ್ಲಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಸಹಕಾರ ಸಂಘಗಳ ಇತ್ತೀಚಿನ ಕಾನೂನು ತಿದ್ದುಪಡಿಗಳು ಮತ್ತು ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಸುವ ಕುರಿತು ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಹೆಚ್.ಎಸ್.ನಾಗರಾಜಯ್ಯ, ಮಹಿಳಾ ಸಹಕಾರ ಸಂಘಗಳಿಗೆ ಹಾಲು ಒಕ್ಕೂಟದಿಂದ ದೊರೆಯುವ ಸೌಲತ್ತುಗಳ ಕುರಿತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಆರ್ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನಾ ಸಭೆಯಲ್ಲಿದವರು ತಾವು ಯಾವುದೇ ಕಾರಣಕ್ಕೂ 18ರೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿಯೂ ಸಹ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರುಗಳಾದ ಉರಿಗಿಲಿ ರುದ್ರಸ್ವಾಮಿ, ಎಸ್.ವಿ.ಗೋವರ್ಧನರೆಡ್ಡಿ, ಡಿ.ಆರ್.ರಾಮಚಂದ್ರೇಗೌಡ, ಎನ್.ಶಂಕರನಾರಾಯಣಗೌಡ, ಎನ್.ನಾಗರಾಜ್, ಆರ್.ಅರುಣ, ಪಿ.ಎನ್.ಕೃಷ್ಣಾರೆಡ್ಡಿ, ಕೆ.ಎಂ.ವೆಂಕಟೇಶಪ್ಪ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ.ಎಂ, ವ್ಯವಸ್ಥಾಪಕಿ ಎನ್.ಲಕ್ಷ್ಮೀದೇವಿ, ರವಿಕುಮಾರ್ ಇದ್ದರು.